ಹರಪನಹಳ್ಳಿ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಸಹೋದರರಿಬ್ಬರು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ತಾಲೂಕಿನ ಹಲುವಾಗಲು ಗ್ರಾಮದ ಬಳಿ ಭಾನುವಾರ ಸಂಜೆ ನಡೆದಿದೆ.

ಹಲುವಾಗಲು ನಿವಾಸಿಗಳಾದ ಎಂ.ಜಿ. ಮನು (19), ಎಂ.ಜಿ. ಪ್ರಜ್ವಲ್‌ (18) ಮೃತರು.

ಮಂಜಪ್ಪ ಎಂಬವರು ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಈಜಾಡಲು ತೆರಳಿದ್ದರು. ಈ ವೇಳೆ ಹಿರಿಯ ಪುತ್ರ ಮನು, ಎರಡನೇ ಪುತ್ರ ಪ್ರಜ್ವಲ್‌, ಮೂರನೇ ಪುತ್ರ ಚಿರಂಜೀವಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಕಿರಿಯ ಪುತ್ರ ಚಿರಂಜೀವಿಯನ್ನು ಮಾತ್ರ ರಕ್ಷಿಸಲು ತಂದೆಗೆ ಸಾಧ್ಯವಾಗಿದೆ. ಮೃತ ಮನು ಒಂದನೇ ವರ್ಷದ ಬಿಇ ವಿದ್ಯಾರ್ಥಿಯಾಗಿದ್ದ, ಪ್ರಜ್ವಲ್‌ ಪಿಯು ವಿದ್ಯಾರ್ಥಿಯಾಗಿದ್ದ.

ನದಿಯಲ್ಲಿ ಕೊಚ್ಚಿ ಹೋಗಿದ್ದ ಮೃತದೇಹಗಳನ್ನು ಗೃಹರಕ್ಷಕ ದಳದ ಡಿ. ಚಂದ್ರಪ್ಪ ನೇತೃತ್ವದ ವೆಂಕಟೇಶ, ನಾಗರಾಜ, ಪೈಲ್ವಾನ್‌ ರಾಮಚಂದ್ರಪ್ಪ ತಂಡ ಹುಡುಕಿ ದಂಡೆಗೆ ತಂದಿದ್ದಾರೆ. ಈ ತಂಡಕ್ಕೆ ಐದು ಸಾವಿರ ನಗದು ಬಹುಮಾನವನ್ನು ಪೊಲೀಸರು ನೀಡಿದ್ದಾರೆ.

ಡಿವೈಎಸ್ಪಿ ಸಂತೋಷ ಚವ್ಹಾಣ, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್‌ಐ ಕಿರಣಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.