ನಗರದಲ್ಲಿ ಸೋಮವಾರ ರಾತ್ರಿಯಿಡೀ ಹಾಗೂ ಮಂಗಳವಾರ ಬೆಳಗ್ಗೆ ಸುರಿದ ಮಳೆಗೆ ಮರಗಳು ಧರೆಗುರುಳಿ, ವಾಹನಗಳು ಜಖಂಗೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸೋಮವಾರ ರಾತ್ರಿಯಿಡೀ ಹಾಗೂ ಮಂಗಳವಾರ ಬೆಳಗ್ಗೆ ಸುರಿದ ಮಳೆಗೆ ಮರಗಳು ಧರೆಗುರುಳಿ, ವಾಹನಗಳು ಜಖಂಗೊಂಡಿವೆ. ಎಂದಿನಂತೆ ರಸ್ತೆಗಳು, ಫ್ಲೈಓವರ್‌ಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಮಂಗಳವಾರ ಬೆಳಗ್ಗೆ ಕಚೇರಿ, ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು.

ಮಲ್ಲೇಶ್ವರಂನ ಸ್ಮಾರ್ಟ್ ಬಜಾರ್ ಹಾಗೂ ಮಂತ್ರಿ ಮಾಲ್ ಸಮೀಪ ಜಿಬಿಎ ಕೈಗೊಂಡಿದ್ದ ಡ್ರೈನೇಜ್ ಕಾಮಗಾರಿಯಿಂದಾಗಿ ಮರದ ಬೇರುಗಳು ತುಂಡಾಗಿ ಬೃಹತ್ ಮರಗಳು ಧರೆಗುರುಳಿವೆ. ಮರ ಬಿದ್ದ ರಭಸಕ್ಕೆ ಎರಡು ಕಾರುಗಳು, ಎಲ್ಪಿಜಿ ಗ್ಯಾಸ್ ಸಾಗಿಸುವ ಆಟೋ ಹಾಗೂ ಬೈಕ್ ಜಖಂಗೊಂಡಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನಾನು ಪ್ರತಿದಿನ ಕಾರಿನಲ್ಲೇ ಮಲಗುತ್ತಿದ್ದೆ. ನಿನ್ನೆ ಮನೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಜಖಂಗೊಂಡ ಕಾರಿನ ಚಾಲಕ ವಿನೋದ್ ಹೇಳಿದರು. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಬೆಳಗ್ಗೆ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸ್ಥಳಕ್ಕೆ ಆಗಮಿಸಿದ ಸಂಚಾರ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು.

ನಗರದ ಪೂರ್ವ, ಈಶಾನ್ಯ ಮತ್ತು ಉತ್ತರ ಭಾಗದಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದ ಹೂಡಿ, ಮಾರತ್ತಹಳ್ಳಿ, ಪಣತ್ತೂರು ಹಾಗೂ ಓಕಳಿಪುರಂ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು.ಬೆಳ್ಳಂದೂರು, ಕೆ.ಆರ್. ಪುರಂ ಹಾಗೂ ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಗಳು ಜಲಾವೃತಗೊಂಡಿದ್ದವು. ನೀರು ಸರಾಗವಾಗಿ ಹರಿಯುವಂತೆ ಮಾಡಲು ಪಾಲಿಕೆ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು.

ಮಳೆ ನೀರಲ್ಲಿ ಬಿದ್ದ ಬೈಕ್ ಸವಾರ

ವೈಟ್‌ಫೀಲ್ಡ್ ನಲ್ಲೂರಹಳ್ಳಿ ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರನೊಬ್ಬ ಮಳೆ ನೀರಿನಲ್ಲಿ ತೆರಳುವಾಗ ಅಯತಪ್ಪಿ ಬೈಕ್‌ ಸಮೇತ ಬಿದ್ದಿದ್ದಾನೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾಫಿಕ್ ಜಾಮ್ ಇದ್ದ ರಸ್ತೆ ಬಿಟ್ಟು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಳೆ ನೀರು ನಿಂತಿದ್ದ ಕಡೆ ಬೈಕ್ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ವಾಹನ ಸವಾರ ಬಿದ್ದಿದ್ದಾನೆ.

ಅ.3ರವರೆಗೆ ಭಾರಿ ಮಳೆ

ನಗರದಲ್ಲಿ 24 ಮಿ.ಮೀ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 43 ಮಿ.ಮೀ ಮಳೆಯಾಗಿದೆ. ಅ.3ರವರೆಗೂ ನಗರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.