ಬಂಗಾರಪೇಟೆ: ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಾಲೂಕಿನ ಕಾಮಸಮುದ್ರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕಾಮಸಮುದ್ರ ಸಮೀಪದ ಬೊಡೇನಹಳ್ಳಿ ಗ್ರಾಮದ ತನುಶ್ರೀ (15) ಹಾಗೂ ಕಾರ್ತಿಕ್ (8) ಮೃತ ಮಕ್ಕಳಾಗಿದ್ದು, ತನುಶ್ರೀ ಗ್ರಾಮದ ಬಾಬು ಮತ್ತು ರೂಪ ದಂಪತಿಗಳ ಪುತ್ರಿಯಾಗಿದ್ದು, ಕಾರ್ತಿಕ್ ವರದರಾಜು ಶ್ಯಾಮಲ ದಂಪತಿಯ ಪುತ್ರ ಎಂದು ತಿಳಿದು ಬಂದಿದೆ. ತಾಲೂಕಿನ ನಲ್ಲಗುಟ್ಟಹಳ್ಳಿ ಜೀವನ್ ಪ್ರಗತಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಕಾರ್ತಿಕ್ ಓದುತಿದ್ದರೆ, ತನುಶ್ರೀ ಇತ್ತೀಚೆಗಷ್ಟೇ ಬಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಳು. ಇಬ್ಬರೂ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದಾಗ ಮೊದಲು ಕಾರ್ತಿಕ್ ಆಕಸ್ಮಿಕವಾಗಿ ಕಾಲು ಜಾರಿ ಹೊಂಡದಲ್ಲಿ ಬಿದ್ದಾಗ ತನುಶ್ರೀ ರಕ್ಷಿಸಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ತಹಸೀಲ್ದಾರ್ ಕೆ.ಎನ್. ಸುಜಾತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಕೆ.ಎಂ. ಸ್ಥಳಕ್ಕೆ ಭೇಟಿ ನೀಡಿದರು. ಮಕ್ಕಳನ್ನು ಕಳೆದುಕೊಂಡು ಶೋಕತಪ್ತರಾದ ಪೋಷಕರಿಗೆ ಸಾಂತ್ವನ ಹೇಳಿದರು.