ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹಿಂದು ಸಂಘಟನೆಗಳ ಪ್ರತಿಭಟನೆ ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಗರದ ಹಳೆ ಭಾಗದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಲ್ಲು ತೂರಾಟದಲ್ಲಿ ಓರ್ವ ಸರ್ಕಲ್ ಇನ್ಸೆಪೆಕ್ಟರ್, ಒಬ್ಬ ಇನ್ಸೆಪೆಕ್ಟರ್ ಸೇರಿ ನಾಲ್ವರು ಪೊಲೀಸರಿಗೆ ಕಲ್ಲೇಟು ಬಿದ್ದಿದ್ದು, 30ಕ್ಕೂ ಹೆಚ್ಚು ವಾಹನಗಳು, ಹಲವಾರು ಮನೆಗಳ ಕಿಟಕಿ ಗಾಜುಗಳು ಪುಡಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.ನಾಗಮಂಗಲ ಘಟನೆ ಖಂಡಿಸಿ ಪ್ರತಿಭಟಿಸುತ್ತಿದ್ದ ವೇಳೆ ಹಿಂದು ಜಾಗರಣಾ ವೇದಿಕೆ ಮುಖಂಡ ಸತೀಶ ಪೂಜಾರಿ ಹೇಳಿಕೆ ಖಂಡಿಸಿ ಅನ್ಯ ಕೋಮಿನ ಯುವಕನೊಬ್ಬ ಬೇತೂರು ರಸ್ತೆಗೆ ಬರುವಂತೆ ಸವಾಲು ಹಾಕಿದ್ದನು.
ಅಲ್ಲದೇ, ಹಿರಿಯ ನಾಗರೀಕರೊಬ್ಬರು ಅವಾಚ್ಯವಾಗಿ ನಿಂದಿಸಿ, ಬೇತೂರು ರಸ್ತೆಗೆ ಬರುವಂತೆ ಹೇಳಿದನ್ನು ಗಂಭೀರವಾಗಿ ಪರಿಗಣಿಸಿದ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಗುರುವಾರ ಸಂಜೆ ಇಲ್ಲಿನ ಜಗಳೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದ ಬಳಿ ಜಮಾಯಿಸಿದ್ದರು.ಪ್ರತಿಭಟನೆಗೆ ಮುಂದಾಗಿದ್ದ ಹಿಂದು ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ಪೊಲೀಸ್ ಅಧಿಕಾರಿಗಳು ಮನವೊಲಿಸಿ, ವಾಪಾಸ್ಸು ಕಳಿಸಲು ಮುಂದಾಗಿದ್ದರು. ಅದೇ ಹೊತ್ತಿಗೆ ಅರಳಿ ಮರ ವೃತ್ತದ ಬಳಿ ಗಣೇಶ ವಿಸರ್ಜನಾ ಮೆರವಣಿಗೆಯೊಂದು ಡಿಜೆ ಸಮೇತ ಬಂದಿದೆ. ಆಗ ಹಿಂದುಗಳು ಜೈಶ್ರೀರಾಮ್ ಘೋಷಣೆ ಮೊಳಗಿಸಿದರೆ, ಮುಸ್ಲಿಂ ಯುವಕರು ಅಲ್ಲಾಹು ಅಕ್ಬರ್ ಎಂಬುದಾಗಿ ಘೋಷಣೆ ಕೂಗ ತೊಡಗಿದ್ದಾರೆ. ಪರಿಸ್ಥಿತಿ ಕೈಮೀರುವ ಸಾಧ್ಯತೆ ಗ್ರಹಿಸಿದ ಪೊಲೀಸರು ಜಾಗೃತರಾಗುವಷ್ಟರಲ್ಲೇ ಕತ್ತಲೆಯಿಂದ ಕಲ್ಲೊಂದು ಮೆರವಣಿಗೆ ಮೇಲೆ ಬಂದು ಬೀಳುತ್ತಿದ್ದಂತೆಯೇ ಪರಿಸ್ಥಿತಿ ಬೇರೆಯದ್ದೇ ರೂಪ ಪಡೆಯಿತು.
ನೂರಾನಿ ಆಟೋ ನಿಲ್ದಾಣ ಬಳಿ, ಚಿಗಟೇರಿ ಮಿಲ್‌ನ ಖಾಲಿ ಜಾಗದ ಬಳಿ ಹಲವಾರು ಯುವಕರ ಗುಂಪು ಬೈಕ್‌ಗಳಲ್ಲಿ ಬಂದು, ಕಲ್ಲು ತೂರಾಟ ಆರಂಭಿಸಿದೆ. ತಕ್ಷಣವೇ ಪರಿಸ್ಥಿತಿಯನ್ನು ಗ್ರಹಿಸಿದ ಯುವಕರು ಪೊಲೀಸರ ರಕ್ಷಣೆಯಲ್ಲಿ ಗಣೇಶ ವಿಸರ್ಜನೆಗೆ ಮುಂದಾದರು. ಮತ್ತೊಂದು ಕಡೆ ವಿಷಯ ಕಾಡ್ಗಿಚ್ಚಿನಲ್ಲಿ ಹರಡಿದ್ದರಿಂದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಗುಂಪುಗಳು, ಬೈಕ್‌ನಲ್ಲಿ ಕಲ್ಲು ತೂರಾಟ ನಡೆಸಿದ ವಿಚಾರ ತಿಳಿದ ಹಲವು ಯುವಕರು ಮೆರವಣಿಗೆ ಬಳಿ, ಸಜ್ಜಾಗಿ ಬಂದಿದ್ದಾರೆ. ಅಷ್ಟರಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಿಂದ ಅಧಿಕಾರಿಗಳು, ಸಿಬ್ಬಂದಿ, ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.ಕಲ್ಲು ತೂರಾಟ ನಡೆಸಿದ್ದ ಗುಂಪುಗಳು, ಕಿಡಿಗೇಡಿಗಳನ್ನು ಪೊಲೀಸರು ಲಾಠಿ ಪ್ರಹಾರ ಮಾಡಿ, ಅಲ್ಲಿಂದ ಓಡಿಸಿದ್ದಾರೆ. ಘಟನೆಯಲ್ಲಿ ಓರ್ವ ವೃತ್ತ ನಿರೀಕ್ಷಕರು, ಒಬ್ಬ ಸಬ್ ಇನ್ಸೆಪೆಕ್ಟರ್, ಇಬ್ಬರು ಪೊಲೀಸ್ ಸಿಬ್ಬಂದಿಗೆ ಕಲ್ಲೇಟು ಬಿದ್ದು, ಕೆಲವರಿಗೆ ಸಣ್ಣಪುಟ್ಟ ರಕ್ತಗಾಯಗಳಾಗಿವೆ. ಕಿಡಿಗೇಡಿಗಳ ಗುಂಪು ಬೈಕ್‌ಗಳನ್ನೇರಿ, ಮಟ್ಟಿಕಲ್ಲು, ಆನೆಕೊಂಡ, ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಜನರಿಲ್ಲದ ಕಡೆಗೆ ಏಕಾಏಕಿ ನುಗ್ಗಿ, ದಿಢೀರನೇ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಭಯಭೀತರಾದ ಮಹಿಳೆಯರು, ಮಕ್ಕಳು, ವಯೋವೃದ್ಧರು ಪ್ರಾಣ ಕೈಯಲ್ಲಿ ಹಿಡಿದುಕೊಂಡಿದ್ದರು. ಮಟ್ಟಿಕಲ್ಲು, ಆನೆಕೊಂಡ, ನೂರಾನಿ ಶಾದಿ ಮಹಲ್ ಇತರಡೆ ಕಲ್ಲು ತೂರಾಟದ ಸುದ್ದಿ ತಿಳಿದ ಯುವಕರು ಅಲ್ಲಿಗೆ ಧಾವಿಸಿ, ಕಲ್ಲು ತೂರಿದವರ ಸಮುದಾಯದವರಿರುವ ಕಡೆ ನುಗ್ಗಲು ಪ್ರಯತ್ನಿಸಿದ್ದಾರೆ. ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿಗಳಾದ ಮಲ್ಲೇಶ ದೊಡ್ಮನಿ, ಬಿ.ಎಸ್.ಬಸವರಾಜ, ಪಿ.ಬಿ.ಪ್ರಕಾಶ ಸೇರಿ ಅಧಿಕಾರಿಗಳು ವಿವಿಧೆಡೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಸ್ವತಃ ಹಿರಿಯ ಅಧಿಕಾರಿಗಳು ಮೆರವಣಿಗೆಯಲ್ಲಿದ್ದ ಯುವಕರ ಗುಂಪನ್ನು ಸಮಾಧಾನಪಡಿಸುವಲ್ಲಿ ಹರಸಾಹಸಪಡಬೇಕಾಯಿತು. ಮಟ್ಟಿಕಲ್ಲು, ಆನೆಕೊಂಡ, ಆರ್‌ಎಂಸಿ ರಸ್ತೆ, ವೆಂಕಟೇಶ್ವರ ವೃತ್ತ, ನೂರಾನಿ ಶಾದಿ ಮಹಲ್, ಚಿಗಟೇರಿ ಮಿಲ್ ಜಾಗ, ಬೇತೂರು ರಸ್ತೆ, ಅರಳಿ ಮರ ವೃತ್ತ, ನರಸರಾಜ ಪೇಟೆ, ಬೇತೂರು ರಸ್ತೆ, ಅಹಮ್ಮದ್ ನಗರ, ಚೌಕಿಪೇಟೆ, ಬಸವರಾಜ ಪೇಟೆ, ಗಾಂಧಿ ನಗರ ಹೀಗೆ ನಾನಾ ಕಡೆ ಪರಿಸ್ಥಿತಿ ಕೈಮೀರುವ ಪರಿಸ್ಥಿತಿ ಇದ್ದು, ಪೊಲೀಸರು ಹದ್ದಿನಕಣ್ಣಿಟ್ಟು ತೀವ್ರ ನಿಗಾ ವಹಿಸಿದ್ದಾರೆ.