ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗಿನ ಇಬ್ಬರು ಆಯ್ಕೆ

| Published : Jan 24 2024, 02:03 AM IST

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಕೊಡಗಿನ ಇಬ್ಬರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಾಂತರ ಕಿರಿಯ ವಿಭಾಗದಲ್ಲಿ ಕೊಡಗರಹಳ್ಳಿಯ ಸುಂಟಿಕೊಪ್ಪನಾಡು ಪ್ರೌಢಶಾಲೆಯ ಎ.ಎಸ್.ಶ್ರೀಶಾ, ನಗರ ಕಿರಿಯ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಶ್ರೀಯ ಕಿರಣ್ ರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕರ್ನಾಟಕ ವಿಜ್ಞಾನ ಪರಿಷತ್‌ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ನಗರದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಶ್ರಯದಲ್ಲಿ ಸೋಮವಾರ ಮುಕ್ತಾಯಗೊಂಡ 31ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಕೊಡಗಿನ ಇಬ್ಬರು ಕಿರಿಯ ವಿಜ್ಞಾನಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.

ಗ್ರಾಮಾಂತರ ಕಿರಿಯ ವಿಭಾಗದಲ್ಲಿ ಮಾರ್ಗದರ್ಶಿ, ಶಿಕ್ಷಕಿ ಎಂ.ಟಿ.ಶೋಭಾ ಅವರ ಮಾರ್ಗದರ್ಶನದಲ್ಲಿ ‘ಕಲುಷಿತಗೊಳ್ಳುತ್ತಿರುವ ಜೀವನದಿ ಕಾವೇರಿ ಮತ್ತು ಪರಿಹಾರೋಪಾಯಗಳು’ ಎಂಬ ವಿಷಯದ ಕುರಿತು ಉತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಕೊಡಗರಹಳ್ಳಿಯ ಸುಂಟಿಕೊಪ್ಪನಾಡು ಪ್ರೌಢಶಾಲೆಯ ಎ.ಎಸ್.ಶ್ರೀಶಾ ಸಮಾವೇಶಕ್ಕೆ ಆಯ್ಕೆಯಾಗಿದ್ದಾಳೆ ಎಂದು ವಿಜ್ಞಾನ ಸಮಾವೇಶದ ಜಿಲ್ಲಾ ಸಮನ್ವಯಾಧಿಕಾರಿ ಜಿ.ಶ್ರೀಹರ್ಷ ತಿಳಿಸಿದ್ದಾರೆ.

ನಗರ ಕಿರಿಯ ವಿಭಾಗದಲ್ಲಿ ‘ಜೇನು ಕೃಷಿಯ ಮಹತ್ವ’ ಕುರಿತು ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್.ಶೃತಿ ಮಾರ್ಗದರ್ಶನದಲ್ಲಿ ಉತ್ತಮವಾಗಿ ವೈಜ್ಞಾನಿಕ ಪ್ರಬಂಧ ತಯಾರಿಸಿ ಮಂಡಿಸಿದ ಕಿರಿಯ ವಿಜ್ಞಾನಿ ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಶ್ರೀಯ ಕಿರಣ್ ರಾಷ್ಟ್ರೀಯ ಸಮಾವೇಶಕ್ಕೆ ಆಯ್ಕೆಯಾಗಿದ್ದಾಳೆ.

2024ರ ಏಪ್ರಿಲ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕೊಡಗಿನ ಈ ಇಬ್ಬರು ಕಿರಿಯ ವಿಜ್ಞಾನಿಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಗೊಂಡ ಮಕ್ಕಳು, ಮಾರ್ಗದರ್ಶಿ ಶಿಕ್ಷಕರು ಹಾಗೂ ಶಾಲೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದಕ್ಕೆ ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.