ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲ ರಾತ್ರಿ ಲೈಂಗಿಕ ಕ್ರಿಯೆ ನಡೆಸದ ಕಾರಣಕ್ಕೆ ₹2 ಕೋಟಿ ಜೀವಾನಂಶ ನೀಡುವಂತೆ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಪತ್ನಿ ಕುಟುಂಬದವರ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.ಮಾರೇನಹಳ್ಳಿ ನಿವಾಸಿ ಕೆ.ಎಂ.ಪ್ರವೀಣ್ ಕುಮಾರ್ ಸಂತ್ರಸ್ತರಾಗಿದ್ದು, ಇವರ ದೂರು ಆಧರಿಸಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಗಿರಿನಗರದ ಅವರ ಪತ್ನಿ ಚಂದನಾ ಹಾಗೂ ಕುಟುಂಬಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ವಿವರ ಹೀಗಿದೆ:ಕಳೆದ ಮೇ ತಿಂಗಳಲ್ಲಿ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಪ್ರವೀಣ್ ಹಾಗೂ ಚಂದನಾ ವಿವಾಹವಾಗಿದ್ದರು. ಮೇ 16ರಂದು ಅತ್ತೆಯ ಮನೆಯಲ್ಲಿ ಮೊದಲ ರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದರು. ಕೆಲ ಅಡಚಣೆಗಳಿಂದಾಗಿ ಆ ದಿನ ಲೈಂಗಿಕ ಕ್ರಿಯೆ ನಡೆದಿರಲಿಲ್ಲ. ಇದಾದ ಎರಡು ದಿನಗಳ ನಂತರವೂ ದೈಹಿಕ ಒತ್ತಡವಿದ್ದ ಕಾರಣಕ್ಕೆ ಪತ್ನಿ ಜತೆ ಲೈಂಗಿಕ ಸಂಪರ್ಕ ಮಾಡದೆ ಪ್ರವೀಣ್ ದೂರವಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಈ ವಿಷಯವಾಗಿ ಪತಿಯನ್ನು ಹೀಯಾಳಿಸಿ ಹಾಗೂ ಅವಾಚ್ಯವಾಗಿ ನಿಂದಿಸಿ ಪ್ರವೀಣ್ ಪತ್ನಿ ಗಲಾಟೆ ಮಾಡಿದ್ದರು. ಬಳಿಕ ಪ್ರವೀಣ್‌ಗೆ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದು ಅಪಪ್ರಚಾರ ಮಾಡಿದ್ದರು. ಮೇ 19ರಂದು ಪತ್ನಿಯನ್ನು ಅವರ ಚಿಕ್ಕಪ್ಪ ಮನೆಗೆ ಕರೆದುಕೊಂಡು ಹೋಗಿದ್ದರು. ಆ ನಂತರ ಪ್ರವೀಣ್ ಅವರ ತಾಯಿಗೆ ಕರೆ ಮಾಡಿದ್ದ ಪತ್ನಿ ಮೊದಲ ರಾತ್ರಿ ವಿಷಯ ತಿಳಿಸಿ ದೂರು ನೀಡಿದ್ದರು.ಕೆಲ ದಿನಗಳ ಬಳಿಕ ಚಂದನಾಳ 15-17 ಸಂಬಂಧಿಕರು ಪ್ರವೀಣ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಆಗ ಎಲ್ಲಾ ಸಂಬಂಧಿಕರನ್ನು ಒಗ್ಗೂಡಿಸಿ ಪಂಚಾಯತಿ ಮಾಡಿ ₹2 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಚಂದನಾ ಹೆಸರಿಗೆ ವರ್ಗಾವಣೆ ಮಾಡುವಂತೆ ಪ್ರವೀಣ್ ಮೇಲೆ ಆರೋಪಿಗಳು ಒತ್ತಡ ಹಾಕಿದ್ದರು. ಇದೇ ವಿಷಯವಾಗಿ ಎರಡ್ಮೂರು ಬಾರಿ ಮನೆಯೊಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ನಾಶಪಡಿಸಿದ್ದಾರೆ. ನಂತರ ಮನೆ ಮುಂದೆ ಮಲಗಿಕೊಂಡು ತೊಂದರೆ ನೀಡಿದ್ದಾರೆ. ಅಲ್ಲದೆ, ಪ್ರವೀಣ್ ಮೇಲೆ ಮರಣಾಂತಿಕ ಹಲ್ಲೆ ಸಹ ನಡೆಸಿದ್ದಾರೆ. ಈ ಕೃತ್ಯಕ್ಕೆ ಸಾಕ್ಷಿಗಳಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ವೈದ್ಯಕೀಯ ವರದಿಗಳಿವೆ. ಈ ದೌರ್ಜನ್ಯವನ್ನು ಸಹಿಸಲಾರದೆ ಕೊನೆಗೆ ಪೊಲೀಸ್ ಠಾಣೆಗೆ ಪ್ರವೀಣ್ ದೂರು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
;Resize=(128,128))
;Resize=(128,128))
;Resize=(128,128))
;Resize=(128,128))