ಸಾರಾಂಶ
ಸೊಪ್ಪಿನ ವೈವಿಧ್ಯವನ್ನು ಮತ್ತೆ ಜನಪ್ರಿಯಗೊಳಿಸಲು "ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗ "ವು ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ "ಸೊಪ್ಪು ಮೇಳ " ಹಮ್ಮಿಕೊಕೊಂಡಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ನಮ್ಮ ಸುತ್ತಲೂ ಪ್ರಚಲಿತದಲ್ಲಿದ್ದ ಸೊಪ್ಪಿನ ವೈವಿಧ್ಯವನ್ನು ಮತ್ತೆ ಜನಪ್ರಿಯಗೊಳಿಸಲು "ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗ "ವು ನಗರದಲ್ಲಿ ಮೊದಲ ಬಾರಿಗೆ "ಸೊಪ್ಪು ಮೇಳ " ಹಮ್ಮಿಕೊಳ್ಳುವ ಮೂಲಕ ತೊಪ್ಪಲು ಪಲ್ಲೆ ಲೋಕದ ವೈಭವ ಅನಾವಣರಗೊಳಿಸಲು ಮುಂದಾಗಿದೆ.
ಇಲ್ಲಿನ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಅ. 19, 20ರಂದು ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ನಡೆಯಲಿರುವ ಮೇಳದಲ್ಲಿ ನೂರಕ್ಕೂ ಅಧಿಕ ಬಗೆಯ ಸೊಪ್ಪುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ಸೊಪ್ಪಿನ ಲೋಕ ಬಹು ದೊಡ್ಡದು. ದಂಟು, ರಾಜಗೀರ, ಹರಿವೆ, ಹಕ್ಕರಕಿ ಸೊಪ್ಪು, ಅಣ್ಣೆ ಸೊಪ್ಪು, ಕಿರಿಕಸಾಲಿ, ಬಸಳೆ... ಹೀಗೆ ನೂರಕ್ಕೂ ಅಧಿಕ ಬಗೆಯ ಸೊಪ್ಪಿನ ತಳಿಗಳಿವೆ. ನಿಸರ್ಗದತ್ತವಾಗಿ ಸಿಗುವ ಸಾಗುವಳಿ ಮಾಡದ "ಕಳೆ " ಎಂದು ನಿರ್ಲಕ್ಷ್ಯಕ್ಕೊಳಗಾಗಿರುವ ಸೊಪ್ಪಿನ ತಳಿಗಳು ಬಹಳಷ್ಟಿವೆ. ಸೊಪ್ಪು ಪರಿಪೂರ್ಣ ಆಹಾರ, ದೇಹಕ್ಕೆ ಬೇಕಾದ ಪೋಷಣೆ ಹಾಗೂ ಚೈತನ್ಯ ನೀಡುವಂತಹದು. ಜತೆಗೆ ರಕ್ತಹೀನತೆ, ಅಪೌಷ್ಟಿಕತೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಈ ಸೊಪ್ಪಿನಲ್ಲಿದೆ.
ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು ಮತ್ತು ತುಮಕೂರು ಭಾಗಗಳಿಂದ ಬರುತ್ತಿರುವ ರೈತ ಗುಂಪುಗಳು ಬಗೆಬಗೆಯ ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿವೆ. ದಿನ ಬಳಕೆಯ ಸೊಪ್ಪು, ಔಷಧೀಯ ಸೊಪ್ಪು, ಸಾಗುವಳಿ ಮಾಡದ ನಿಸರ್ಗದತ್ತ ಸೊಪ್ಪು, ಕಾಡಿನ ಸೊಪ್ಪು, ಬಳ್ಳಿ ಸೊಪ್ಪು, ಮರಾಧಾರಿತ ಸೊಪ್ಪು ಮತ್ತು ವಿದೇಶಿ ಸೊಪ್ಪುಗಳು ಈ ಪ್ರದರ್ಶನದಲ್ಲಿ ವೀಕ್ಷಣೆ ಮಾಡಬಹುದಾಗಿದೆ.ಬೆಳೆಯುವ ಮಾಹಿತಿ:
ಈ ಮೇಳದಲ್ಲಿ ಸೊಪ್ಪಿನ ಕೃಷಿ ಮತ್ತು ಸೊಪ್ಪಿನ ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ರೈತರಿಗೆ ತರಬೇತಿ ಏರ್ಪಡಿಸಲಾಗಿದೆ. ವಿಷಮುಕ್ತವಾಗಿ ಸೊಪ್ಪಿನ ಕೃಷಿ ಮಾಡುವ ಬಗೆ, ಲೆಟ್ಯುಸ್, ಕಾಲೆಯಂತಹ ವಿದೇಶಿ ಸೊಪ್ಪಿನ ತಳಿಗಳನ್ನು ಬೆಳೆಸುವ ಬಗೆ, ದೇಸಿ ಸೊಪ್ಪಿನ ತಳಿಗಳ ಬೀಜೋತ್ಪಾದನೆಯ ಬಗ್ಗೆ ಮಾಹಿತಿ ಸಹ ನೀಡಲಾಗುತ್ತಿದೆ. ಬೆಂಗಳೂರು ನಗರಕ್ಕೆ ಸಾವಯವ ಸೊಪ್ಪು ಮತ್ತು ತರಕಾರಿ ಸರಬರಾಜು ಮಾಡಿ, ವಾರ್ಷಿಕ ₹ 17 ಕೋಟಿ ವಹಿವಾಟು ಮಾಡುತ್ತಿರುವ ಸಹಜ ಆರ್ಗಾನಿಕ್ಸ್‌ನ ಆನಂದ ತೀರ್ಥ ಪ್ಯಾಟಿ ಈ ಮೇಳದಲ್ಲಿ ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.ಮೇಳದ ವಿಶೇಷ:
ಅ. 19ರಂದು ಬೆಳಗ್ಗೆ 10ಕ್ಕೆ ಮೇಳಕ್ಕೆ ಚಾಲನೆ ದೊರೆಯಲಿದ್ದು, ಮಧ್ಯಾಹ್ನ 12ಕ್ಕೆ "ಅಜ್ಜಿಯ ಮಡಿಲು ಸೊಪ್ಪಿನ ಕಡಲು " ಕಾರ್ಯಕ್ರಮ ಏರ್ಪಡಿಸಲಾಗಿದೆ. ತುಮಕೂರಿನ ಮುರಳೀಧರ್ ಗುಂಗುರುಮಳೆ ಹೊಲ, ಬೇಲಿ, ಗದ್ದೆ ಮತ್ತು ರಸ್ತೆ ಬದಿಗಳಲ್ಲಿ ಸಿಗುವ ಸೊಪ್ಪಿನ ವೈವಿಧ್ಯ ಪರಿಚಯಿಸುವರು. ಅಜ್ಜಿಯಂದಿರು, ದನಗಾಯಿಗಳು ಮತ್ತು ನಾಟಿ ವೈದ್ಯರು ತರಹೇವಾರಿ ಸೊಪ್ಪು ಮತ್ತು ಔಷಧೀಯ ಗಿಡಗಳನ್ನು ತರಲಿದ್ದಾರೆ. ಹೆಗ್ಗಡದೇವನಕೋಟೆಯ ಹಳ್ಳಿಗರು "ಬೆರಕೆ ಸೊಪ್ಪನ್ನು " ಈ ಮೇಳದಲ್ಲಿ ಪರಿಚಯಿಸಲಿದ್ದಾರೆ. ನಾಗರಹೊಳೆ ಕಾಡಿನ ಜೇನು ಕುರುಬ ಸಮುದಾಯದ ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ. ಅ. 20ರಂದು ಬೆಳಗ್ಗೆ 10ಕ್ಕೆ 5ರಿಂದ 12 ವರ್ಷದ ಮಕ್ಕಳಿಗಾಗಿ "ಸೊಪ್ಪು- ನಾ ಕಂಡಂತೆ " ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.ಬಹುವರ್ಣದ ಸೊಪ್ಪಿನ ಬೀಜ ಮಾರಾಟ
ಕರ್ನಾಟಕದ ವಿವಿಧ ಭಾಗಗಳಿಂದ ಬರುವ ರೈತ ಮತ್ತು ಮಹಿಳಾ ಗುಂಪುಗಳು, ಕೃಷಿ ಉದ್ದಿಮೆದಾರರು ಮತ್ತು ರೈತ ಕಂಪನಿಗಳು ಸಾವಯವ, ಸಿರಿಧಾನ್ಯ ಮತ್ತು ಮೌಲ್ಯವರ್ಧಿತ ಪದಾರ್ಥಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ. ಪಶ್ವಿಮ ಬಂಗಾಳ ಮತ್ತು ಒರಿಸ್ಸಾದ ಬಹುವರ್ಣದ ಸೊಪ್ಪಿನ ಬೀಜ ಮಾರಾಟಕ್ಕೆ ಬರುತ್ತಿದೆ. ಚಳಿಗಾಲದ ತರಕಾರಿ ಬೀಜಗಳೂ ಸಿಗಲಿವೆ. ಹಣ್ಣಿನ ಗಿಡಗಳೂ ಮಾರಾಟಕ್ಕೆ ಸಿಗಲಿವೆ. ನಿಮ್ಮ ಮನೆ ಮುಂದೆ, ಪಾಟ್‌ಗಳಲ್ಲಿ ಬೆಳೆದು ವಿಷಮುಕ್ತ ತರಕಾರಿ ಬೆಳೆಯಲು ಬೇಕಾದ ದೇಸಿ ತರಕಾರಿ ಬೀಜಗಳು ಸಹ ಸಿಗುತ್ತವೆ. ಸೊಪ್ಪಿನ ಲೋಕದ ಈ ಸಂಭ್ರಮದಲ್ಲಿ ಜಿಲ್ಲೆಯ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕಿದೆ.