ನಗರದಲ್ಲಿ ಪ್ರತ್ಯೇಕವಾಗಿ ನಡೆದ ರಸ್ತೆ ಅಪಘಾತದಲ್ಲಿ ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿನ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ 5 ವರ್ಷದ ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಪ್ರತ್ಯೇಕವಾಗಿ ನಡೆದ ರಸ್ತೆ ಅಪಘಾತದಲ್ಲಿ ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಗುವಿನ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ 5 ವರ್ಷದ ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ.ಕೊಮ್ಮಘಟ್ಟ ಬಳಿಯ ಕೆಎಚ್‌ಬಿ ಕಾಲೋನಿ ನಿವಾಸಿ ಶುಭಲತಾ ಪುತ್ರ ಭವೀನ್(5) ಮೃತ ಮಗು. ಅಪಘಾತದಲ್ಲಿ ಮಗುವಿನ ತಾಯಿ ಶುಭಲತಾ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶುಭಲತಾ ಅವರು ಕೋಡಿಪಾಳ್ಯದ ಶಾಲೆಗೆ ಮಗಳನ್ನು ಬಿಟ್ಟು, ಮಗ ಭವೀನ್‌ನನ್ನು ಮತ್ತೊಂದು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಆಗ ಎದುರಿನಿಂದ ಬಂದ ಮತ್ತೊಂದು ಬೈಕ್‌ಗೆ ಇವರ ಇವರ ವಾಹನ ತಗುಲಿದೆ. ಪರಿಣಾಮ ತಾಯಿ ಮಗ ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಚಾಲಕ ನಿಯಂತ್ರಿಸದೇ ಮಗುವಿನ ಮೇಲೆಯೇ ಹರಿಸಿದ ಪರಿಣಾಮ ಭವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಿಪ್ಪರ್ ಚಾಲಕ ಮತ್ತು ಅಪಘಾತಕ್ಕೆ ಕಾರಣವಾದ ಬೈಕ್ ಸವಾರ, ಇಬ್ಬರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೂ ಕೊಡಿಸಲು ಹೋಗ್ತಿದ್ದ ತಂದೆ ಸಾವುಮತ್ತೊಂದು ಪ್ರಕರಣದಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದ ತಂದೆ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ಕೋಡಿಪಾಳ್ಯ ಮುಖ್ಯರಸ್ತೆಯ ಹೆಮ್ಮಿಗೆಪುರದಲ್ಲಿ ಈ ಘಟನೆ ನಡೆದಿದೆ.
ಕೋಡಿಪಾಳ್ಯ ನಿವಾಸಿ ಚೇತನ್(36) ಮೃತ ವ್ಯಕ್ತಿ. ಘಟನೆಯಲ್ಲಿ ಅವರ 4 ವರ್ಷದ ಮಗಳಿಗೂ ಗಾಯವಾಗಿದೆ. ಮಗಳಿಗೆ ಶೂ ಕೊಡಿಸಲು ಆಕೆಯನ್ನು ಕೂರಿಸಿಕೊಂಡು ಬೈಕ್‌ನಲ್ಲಿ ಹೋಗುವಾಗ ಕೋಡಿಪಾಳ್ಯ ಮುಖ್ಯರಸ್ತೆಯ ಹೆಮ್ಮಿಗೆಪುರ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಹರಿದು ಚೇತನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗುವಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.