ರಥದ ಗಾಲಿಗೆ ಸಿಲುಕಿ ಇಬ್ಬರು ಸಾವು

| Published : Apr 29 2024, 01:32 AM IST

ಸಾರಾಂಶ

ಪವಾಡ ಪುರುಷ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವ ಹಿನ್ನೆಲೆ ಗೋಧೂಳಿ ಮೂಹೂರ್ತದಲ್ಲಿ ನಡೆದ ಮಹಾರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಇಂಡಿ

ಪವಾಡ ಪುರುಷ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವ ಹಿನ್ನೆಲೆ ಗೋಧೂಳಿ ಮೂಹೂರ್ತದಲ್ಲಿ ನಡೆದ ಮಹಾರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಘಟನೆಯಲ್ಲಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಲಚ್ಯಾಣ ಗ್ರಾಮದವರಾದ ಸೋಬು ಸಿಂಧೆ (55) ಹಾಗೂ ಇದೆ ಗ್ರಾಮದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅಭಿಷೇಕ ಧನರಾಜ ಮುಜಗೊಂಡ (16) ರಥದ ಗಾಲಿಗೆ ಸಿಲುಕಿ ಮೃತಪಟ್ಟವರು. ಈ ವೇಳೆ ಗಂಭೀರವಾಗಿ ಗಾಯಗೊಂಡಿರುವ ಲಚ್ಯಾಣ ಗ್ರಾಮದ ಬಂಧು ಕಟಕದೊಂಢ ಎನ್ನುವವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಲಚ್ಯಾಣ ಗ್ರಾಮದ ಪವಾಡ ಪುರುಷ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವ ಹಿನ್ನೆಲೆ ಗೋಧೂಳಿ ಮೂಹೂರ್ತದಲ್ಲಿ ನಡೆದಿದ್ದ ಮಹಾರಥೋತ್ಸವ ಈ ದುರ್ಘಟನೆ ಸಂಭವಿಸಿದೆ. ‌ಸಂಜೆ ರಥ ಏಳುವ ಸಮಯದಲ್ಲಿ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇಂದು ರಿಜಲ್ಟ್‌ ನಿರೀಕ್ಷೆಯಲ್ಲಿ ಇದ್ದ ಧನರಾಜ:

ಲಚ್ಯಾಣ ಗ್ರಾಮದ ಅಭಿಷೇಕ ಧನರಾಜ ಮುಜಗೊಂಡ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಅದರಲ್ಲೂ ಸೋಮವಾರ (ಏ.29)ವೇ ಎಸ್ಸೆಸ್ಸೆಲ್ಸಿ ಫಲಿತಾಂಶ ಇದೆ ಎಂಬ ಕಾರಣ ತುಂಬಾ ಉತ್ಸುಕನಾಗಿದ್ದ. ಫಲಿತಾಂಶ ಏನಾಗುತ್ತದೆಯೋ ಎಂಬ ಕಾತುರದ ಮಧ್ಯೆಯೇ ಭಾನುವಾರ ಲಚ್ಯಾಣ ಗ್ರಾಮದ ಪವಾಡ ಪುರುಷ ಸಿದ್ದಲಿಂಗ ಮುತ್ಯಾನ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ. ರಥೋತ್ಸವದ ಮಧ್ಯೆ ಏಕಾಏಕಿ ನೂಕುನುಗ್ಗಲು ಉಂಟಾಗಿ ಇಬ್ಬರು ಆಯತಪ್ಪಿ ಬಿದ್ದು ರಥದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು. ಉನ್ನತ ಶಿಕ್ಷಣದ ಕನಸು ಕಂಡಿದ್ದ ಈ ಬಾಲಕನ ಕನಸು ಇದೀಗ ನುಚ್ಚು ನೂರಾಗಿದೆ.