ಬಳ್ಳಾರಿಯಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರು ವೈದ್ಯರು, ವಕೀಲ ಸಾವು

| Published : Dec 02 2024, 01:15 AM IST

ಬಳ್ಳಾರಿಯಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರು ವೈದ್ಯರು, ವಕೀಲ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಗಾಯಗೊಂಡ ಅಮರೇಗೌಡ ಅವರನ್ನು ಸ್ಥಳೀಯರು ಬಿಮ್ಸ್‌ ಆಸ್ಪತ್ರೆಗೆ ಸಾಗಿಸಲಾಯಿತು.

ಬಳ್ಳಾರಿ: ಕರ್ನಾಟಕ-ಆಂಧ್ರ ಗಡಿಭಾಗವಾದ ವಿಡುಪನಕಲ್ಲು-ಚೇಳ್ಳಗುರ್ಕಿ ಮಾರ್ಗ ಮಧ್ಯೆ ಭಾನುವಾರ ಬೆಳಗಿನಜಾವ ಸಂಭವಿಸಿದ ಅಪಘಾತದಲ್ಲಿ ನಗರದ ಇಬ್ಬರು ವೈದ್ಯರು ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಳ್ಳಾರಿ ಮೆಡಿಕಲ್ ಕಾಲೇಜು (ಬಿಮ್ಸ್‌)ನ ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗೋವಿಂದ ರಾಜು (53), ನೇತ್ರಾ ಚಿಕಿತ್ಸ ವಿಭಾಗದ ಮುಖ್ಯಸ್ಥ ಡಾ.ಆರ್‌.ಬಿ. ಯೋಗೇಶ್‌ (54) ಹಾಗೂ ವಕೀಲ ವೆಂಕಟ ನಾಯ್ಡು (53) ಮೃತಪಟ್ಟವರು. ಮತ್ತೋರ್ವ ಖಾಸಗಿ ಆಸ್ಪತ್ರೆಯ ವೈದ್ಯ ಅಮರೇಗೌಡ ಗಂಭೀರವಾಗಿ ಗಾಯಗೊಂಡಿದ್ದು ಬಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿಗೆ ಮೂವರು ವೈದ್ಯರು, ವಕೀಲರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡ ಅಮರೇಗೌಡ ಅವರನ್ನು ಸ್ಥಳೀಯರು ಬಿಮ್ಸ್‌ ಆಸ್ಪತ್ರೆಗೆ ಸಾಗಿಸಲಾಯಿತು.

ಮೃತ ವೈದ್ಯರು ಸೇರಿದಂತೆ ನಾಲ್ವರು ಬ್ಯಾಂಕಾಕ್‌ ಪ್ರವಾಸ ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದಿಂದ ಅನಂತಪುರಂ ಮಾರ್ಗವಾಗಿ ಬಳ್ಳಾರಿಗೆ ಆಗಮಿಸುತ್ತಿದ್ದರು. ಬೆಳಗಿನಜಾವ 4 ಗಂಟೆಯ ಸುಮಾರಿಗೆ ನಿದ್ರೆಯ ಮಂಪರಿನಲ್ಲಿದ್ದರು. ಕಾರು ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಜಿಲ್ಲೆಯ ಗಡಿಗ್ರಾಮವಾದ ಚೇಳ್ಳಗುರ್ಕಿ ಇನ್ನು ಐದು ಕಿ.ಮೀ. ದೂರದಲ್ಲಿರುವಾಗಲೇ ಅವಘಡ ಸಂಭವಿಸಿದೆ.

ಮೂಲತಃ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೇರಿ ಗ್ರಾಮದ ನಿವಾಸಿಯಾಗಿದ್ದ ಕ್ಯಾನ್ಸರ್‌ ರೋಗ ತಜ್ಞ ಡಾ.ಗೋವಿಂದರಾಜು ಎಂಬಿಬಿಎಸ್‌ ವಿದ್ಯಾಭ್ಯಾಸವನ್ನು ಬಳ್ಳಾರಿಯ ಮೆಡಿಕಲ್‌ ಕಾಲೇಜ್‌ ಹಾಗೂ ಸಂಶೋಧನಾ ಕೇಂದ್ರದಲ್ಲಿ ಪೂರ್ಣಗೊಳಿಸಿದ್ದರು. ಕಲಬುರಗಿಯಲ್ಲಿ ಎಂಎಸ್‌ ಪೂರೈಸಿದ್ದರು. 2002ರಲ್ಲಿ ಇಲ್ಲಿನ ಬಿಮ್ಸ್‌ನಲ್ಲಿ ಸೇವೆ ಆರಂಭಿಸಿದ ಅವರು ಸಹಾಯಕ, ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸದ್ಯ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆಯಲ್ಲಿ ಹೆಸರುವಾಸಿಯಾಗಿದ್ದ ಅವರು 2008ರಿಂದ 2011ರ ವರೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಅವರ ಪತ್ನಿ ಡಾ. ರಚನಾ ದಂತ ಚಿಕಿತ್ಸಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ನಿವಾಸಿ, ನೇತ್ರತಜ್ಞ ಡಾ.ಆರ್‌.ಬಿ. ಯೋಗೇಶ್‌ ಬಳ್ಳಾರಿಯ ಬಿಮ್ಸ್‌ನಲ್ಲಿಯೇ ಎಂಬಿಬಿಎಸ್‌, ಎಂಎಸ್‌ ಪೂರ್ಣಗೊಳಿಸಿದ್ದರು. 2002ರಿಂದ ಬಿಮ್ಸ್‌ನಲ್ಲಿನ ನೇತ್ರಾ ಚಿಕಿತ್ಸಾ ವಿಭಾಗದಲ್ಲಿ ಸೇವೆ ಆರಂಭಿಸಿದ ಅವರು ಸಹಾಯಕ, ಸಹ ಪ್ರಾಧ್ಯಾಪಕ, ಪ್ರಾಧ್ಯಾಪಕರಾಗಿ ಸದ್ಯ ನೇತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. 2022ರಲ್ಲಿ ಬಿಮ್ಸ್‌ನ ಅಧೀಕ್ಷಕರಾಗಿ ಸುಮಾರು ಎಂಟು ತಿಂಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಅವರ ಪತ್ನಿ ಡಾ.ವಿಜಯಲಕ್ಷ್ಮಿ ಡೆಂಟಲ್‌ ಕಾಲೇಜಿನಲ್ಲಿ ರೀಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ.

ಅಪಘಾತದ ವಿಷಯ ಗೊತ್ತಾಗುತ್ತಿದ್ದಂತೆಯೇ ಬಿಮ್ಸ್‌ನ ವೈದ್ಯರು, ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದರು. ಬಿಮ್ಸ್‌ನ ಶವಾಗಾರದ ಬಳಿ ನೂರಾರು ಸಂಖ್ಯೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸಾರ್ವಜನಿಕರು ಆಗಮಿಸಿದ್ದರು. ಮೃತ ವೈದ್ಯರಿಗೆ ಬಿಮ್ಸ್‌ ನಿರ್ದೇಶಕ ಡಾ.ಗಂಗಾಧರ್‌ ಗೌಡ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.