ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ವೈ ಎನ್ ಕೋಟೆ ಜಾಮೀಯಾ ಮಸೀದಿ ಹಾಗೂ ಚಾಂದ್ ಬಾಷಾ ಅವರ ನಡುವಿನ ಕಾನೂನು ಸಮರ ನಡೆಯುತ್ತಿರುವಾಗಲೇ ಪರಸ್ಪರ ಆರೋಪ ದೋಷಾರೋಪಗಳನ್ನು ಮಾಡಲಾಗಿದ್ದು ಜಮೀನು ವಿಚಾರಕ್ಕೆ ಸಂಬಂಧಿಸಿದ ಚರ್ಚೆ ಜೋರಾಗಿದೆ.ಜಾಮೀಯಾ ಮಸೀದಿ ಮತ್ತು ವಕ್ಫ್ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಲು ಚಾಂದ್ ಬಾಷಾ ಉರುಫ್ ರಫೀವುಲ್ಲಾ ಮನವಿ ಸಲ್ಲಿಸಿದ್ದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಅವರ ಆಸ್ತಿಯನ್ನು ಅವರ ಹೆಸರಿಗೆ ಖಾತೆ ಮಾಡದಂತೆ ಒತ್ತಾಯಿಸಿ ಬುಧವಾರ ತಾಲೂಕಿನ ವೈ.ಎನ್.ಹೊಸಕೋಟೆ ಜಾಮೀಯಾ ಮಸೀದಿಯ ಆಡಳಿತ ಮಂಡಳಿ ಸದಸ್ಯರು ತಹಸೀಲ್ದಾರ್ ಡಿ.ಎನ್.ವರದರಾಜುಗೆ ಮನವಿ ಸಲ್ಲಿಸಿದ್ದು ಈ ನಡುವೆ ಚಾಂದ್ ಪಾಷಾ ಸಹ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಹೆಸರಿನಲ್ಲಿರುವ ಪಿರ್ತಾಜಿತ ಆಸ್ತಿಗೆ ಸಂಬಂಧಿಸಿದಂತೆ ಪಹಣಿ ಹಾಗೂ ಇತರೆ ಕಂದಾಯ ಇಲಾಖೆಯ ಅಗತ್ಯ ದಾಖಲೆಗಳಿವೆ. ವಕ್ಫ್ ಬೋರ್ಡಿಗೆ ಸೇರಿದೆ ಎಂದು ಮುತ್ತವಲ್ಲಿಗಳು ನನ್ನ ಜಮೀನನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಇದು ಮಸೀದಿಗೆ ಸೇರಿದ ಜಾಗ ಎಂದು ಕಾಂಪೌಂಡು ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಚಾಂದ್ ಬಾಷಾ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರೆವೆನ್ಯೂ ದಾಖಲಾತಿಗಳಿವೆ. ಈ ಜಮೀನಿಗೆ ಕ೦ದಾಯವನ್ನು ಕಟ್ಟಿದ್ದ ದಾಖಲೆಗಳಿವೆ. ನನ್ನ ತಾತ ಸೈಯ್ಯದ್ ಇಮಾಂಮ್ ಸಾಬ್ ನಿಧನದ ಬಳಿಕ ಪಾವತಿ ವಾರಸು ಮೇರೆಗೆ ತಾತನ ಪುತ್ರ ನನ್ನ ತಂದೆ ಸಯದ್ ಅಬ್ದುಲ್ ಜಬ್ಬಾರ್ ಸಾಬ್ ಅವರ ಹೆಸರಿಗೆ ಈ ಜಮೀನು ವರ್ಗಾವಣೆಯಾಗಿದೆ. ಈ ಸಂಬಂಧ ಅನೇಕ ವರ್ಷದಿಂದ ಕಂದಾಯ ಕಟ್ಟಿದ ರಸೀದಿ ಇತರೆ ದಾಖಲೆಗಳಿವೆ. ತಂದೆ ನಿಧನರಾದ ಬಳಿಕ ನನ್ನ ಹೆಸರಿಗೆ ಈ ಜಮೀನು ವರ್ಗಾವಣೆಯಾಗಿದೆ. ನಮ್ಮ ತಾತ, ನಮ್ಮ ತಂದೆ, ಅಥವಾ ನಾನಾಗಲೀ, ವೈ.ಎನ್.ಹೊಸಕೋಟೆಯ ಆಹಲೆ ಜಮಾತಿನ ಮುತವಲ್ಲಿಗಾಗಲೀ ಅಥವಾ ವಕ್ಸ್ ಮಂಡಳಿಗಾಗಲೀ, ಎಂದೂ ಯಾವುದೇ ರೀತಿಯಲ್ಲಿ ಪರಭಾರೆ ಮಾಡಿರುವುದಿಲ್ಲ. ಈ ಸಂಬಂಧ ನಾವು ಯಾವುದೇ ದಾಖಲಾತಿಗಳನ್ನು ಬರೆದುಕೊಟ್ಟಿರುವುದಿಲ್ಲ. ಈ ಸತ್ಯ ಸಂಗತಿ ಮೆರೆಮಾಚಿ ನಮಗೆ ಸಂಬಂಧವಿಲ್ಲದ ವೈ.ಎನ್.ಹೊಸಕೋಟೆಯ ಆಹಲೇ ಜಮಾತಿನ ಹಿಂದಿನ ಮುತವಲ್ಲಿ ಆದ ಅಬ್ದುಲ್ ರಜಾಕ್‌ಸಾಬ್ ಅವರು ಸದರಿ ಜಮೀನಿಗೆ ನಾನೇ ಮಾಲೀಕನೆಂದು ಹಾಗೂ ಆತನೇ ಸದರಿ ಜಮೀನನ್ನು ಕರ್ನಾಟಕ ವಕ್ಫ್ ಮಂಡಳಿಗೆ ಬಿಟ್ಟುಕೊಟ್ಟಿದ್ದಾರೆಂದು 1965ರಲ್ಲಿ ಗೆಜೆಟ್‌ನಲ್ಲಿ ಕಾನೂನಿಗೆ ವಿರುದ್ಧವಾಗಿ ಪ್ರಕಟಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಜಾಮೀಯ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಯ್ಯದ್ ಸಾದಿಕ್ ಸಾಬ್ ಮಾತನಾಡಿ ಹೊಸಕೋಟೆ ಗ್ರಾಮದ ಸ.ನಂ. 234 ರಲ್ಲಿನ 17-25 ಗುಂಟೆ ಜಮೀನಿದ್ದು, ಈ ಜಮೀನಿನು ಮುಸ್ಲಿಂ ಬಾಂಧವರಿಗೆ ಸೇರಿದೆ. 1965ರಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಈಡೀ ಕರ್ನಾಟಕದಲ್ಲಿ ವಕ್ಫ್ ಆಸ್ತಿಗಳ ಸರ್ವೆಯನ್ನು ನಡೆಸಿದ್ದು, ಈ ನಮ್ಮ ಸ.ನಂ. 234ರ ಜಾಗವನ್ನು ವಕ್ಫ್ ಜಾಗವೆಂದು ಗುರುತಿಸಿ ಗೆಜೆಟ್‌ನಲ್ಲಿ ನಮೂದಿಸಿದ್ದರೂ ಇದೇ ಗ್ರಾಮದ ವ್ಯಕ್ತಿಯೊಬ್ಬರು ಈ ಜಮೀನು ನಮಗೆ ಸೇರಿದೆ ಎಂದು ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿದ್ದು, ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.