ಚಿಕ್ಕಮಗಳೂರುಕಳೆದ ಮೂರು ದಿನಗಳ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ ಮೂರು ದಿನಗಳ ಅಂತರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಕಡೂರು ತಾಲೂಕಿನ ಭೈರಗೊಂಡನಹಳ್ಳಿ ಗ್ರಾಮದ ಬಸವರಾಜ್ (44) ಅ.6 ರಂದು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಬೆಳಕಿಗೆ ಬಂದಿದೆ.
ಕೊತ್ತಿಗೆರೆ ಗ್ರಾಮದ ಶಂಕರಯ್ಯ (58) ಎಂಬ ರೈತ ತನ್ನ ತೋಟದ ಮನೆಯಲ್ಲಿ ಅ.6ರಂದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಭೈರಗೊಂಡನಹಳ್ಳಿ ಗ್ರಾಮದ ಬಸವರಾಜ್ 3.20 ಗುಂಟೆ ಜಮೀನಿದ್ದು ತೋಟದ ಅಭಿವೃದ್ಧಿಗೆ ಕಡೂರು ಡಿಸಿಸಿ ಬ್ಯಾಂಕಿನಲ್ಲಿ ₹1.5 ಲಕ್ಷ ಐಡಿಎಫ್‌ಸಿ ಬ್ಯಾಂಕಿನಲ್ಲಿ ₹30 ಸಾವಿರ, ಹೆಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ₹1 ಲಕ್ಷ ಅಜ್ಜಂಪುರ ಐಡಿಬಿಐ ಬ್ಯಾಂಕಿನಲ್ಲಿ ₹1 ಲಕ್ಷ ಗ್ರಾಮೀಣ ಒಕ್ಕೂಟ ಸಂಘಗಳಲ್ಲಿ ₹1 ಲಕ್ಷ ಸೇರಿ ಒಟ್ಟು ₹4.80 ಲಕ್ಷ ಸಾಲ ಮಾಡಿದ್ದರು ಎನ್ನಲಾಗದೆ.
ಇನ್ನೂ ಕೊತ್ತಿಗೆರೆ ಗ್ರಾಮದ ಶಂಕರಯ್ಯ ಮೂರು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ₹4 ಲಕ್ಷ ಸಾಲ ಪಡೆದಿದ್ದರು.ಕಡೂರು ತಾಲೂಕಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ನಿರೀಕ್ಷಿತ ಬೆಳೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನನೊಂದು ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.
(ಫೋಟೋ ಇವೆ)