ಅರಕಲಗೂಡಲ್ಲಿ 283 ಮತಗಟ್ಟೆಗಳು ಲೋಕಸಭಾ ಚುನಾವಣೆಗೆ ಸಜ್ಜು

| Published : Apr 26 2024, 12:59 AM IST

ಸಾರಾಂಶ

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿಗಳನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಾಸ್ಟರಿಂಗ್ ಕಾರ್ಯ ಅರಕಲಗೂಡು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಚುನಾವಣಾ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ನೀಡುವ ಮಾಸ್ಟರಿಂಗ್‌ ಕಾರ್ಯ

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರ ಮತ್ತು ಚುನಾವಣಾ ಸಾಮಗ್ರಿಗಳನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಾಸ್ಟರಿಂಗ್ ಕಾರ್ಯ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಈ ವೇಳೆ ಚುನಾವಣಾಧಿಕಾರಿ ಧರ್ಮಪಾಲ್ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿ ಮತ್ತು ಮಾನದಂಡಗಳ ಪ್ರಕಾರ ಕ್ರಮ ವಹಿಸುತ್ತಿದ್ದೇವೆ. ಅರಕಲಗೂಡು ಕ್ಷೇತ್ರದಲ್ಲಿ 283 ಮತಗಟ್ಟೆಗಳಿದ್ದು, 1132 ಮಂದಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರ

1 ಮತಗಟ್ಟೆ ಕೇಂದ್ರಕ್ಕೆ ನಾಲ್ವರು ಸಿಬ್ಬಂದಿಯನ್ನು ನೇಮಿಸಿದ್ದು, ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸಲಾಗಿದೆ. ಅಲ್ಲದೆ, ಯಾರಾದರೂ ಸಿಬ್ಬಂದಿ ಅನಾರೋಗ್ಯ ತಪ್ಪಿದರೆ ಪರ್ಯಾಯವಾಗಿ ನಿಯೋಜಿಸಲು ಹೆಚ್ಚುವರಿಯಾಗಿ 56 ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಈಗಾಗಲೇ ಎಲ್ಲಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ಅನುಕೂಲವಾಗಲಿ ಎಂದು ಪಟ್ಟಣದ ಹೆಂಟಗೆರೆ, ಸಾಲಗೇರಿ, ಹಂಪಾಪುರ, ಹುಲಿಕಲ್ಲು, ರಾಮನಾಥಪುರದಲ್ಲಿ ಪಿಂಕ್ ಬೂತ್‌ಗಳನ್ನು ತೆರೆಯಲಾಗಿದೆ. ಅಲ್ಲದೆ, ಅಂಗವಿಕಲರು ಮತದಾನ ಮಾಡಲು ಅನುಕೂಲವಾಗುವಂತೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ 723 ಹಿರಿಯ ನಾಗರಿಕರಿದ್ದು, ಮನೆ ಮನೆಗೆ ತೆರಳಿ 694 ಮಂದಿಯಿಂದ ಮತದಾನ ಮಾಡಿಸಲಾಗಿದೆ. ಕೆಲವರು ಸಾವನ್ನಪ್ಪಿದ್ದರು ಎಂದು ತಿಳಿಸಿದರು.

ಕ್ಷೇತ್ರದಲ್ಲಿ 2.30 ಲಕ್ಷ ಮತದಾರರಿದ್ದು, ಅದರಲ್ಲಿ 1,17,449 ಪುರುಷರು, 1,13,389 ಮಹಿಳೆಯರು ಹಾಗೂ 5 ಇತರೆ ಇದ್ದಾರೆ ಎಂದು ಮಾಹಿತಿ ನೀಡಿದರು.

ಈ ವೇಳೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಇದ್ದರು.

ಮತಯಂತ್ರ, ಮತಗಟ್ಟೆ ಸಿಬ್ಬಂದಿ ಹೊತ್ತು ಸಾಗಲು ನಿಂತಿರುವ ಬಸ್‌ಗಳು.