ಮೃಗಶಿರಾ ಮಳೆಗೆ ಇಬ್ಬರ ಬಲಿ

| Published : Jun 10 2025, 09:55 AM IST

ಸಾರಾಂಶ

ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೃಗಶಿರಾ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೃಗಶಿರಾ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ಅವಘಡಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವಿವಿಧೆಡೆ ಮಳೆಗೆ ಮನೆಗಳು ಕುಸಿದಿವೆ. ಬಿರುಗಾಳಿಗೆ 30 ಎಕರೆ ದಾಳಿಂಬೆ ತೋಟ ನಾಶವಾಗಿದೆ. ವಿದ್ಯುತ್‌ ಕಂಬಗಳು ಬಿದ್ದು, ಹಲವು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ವಿಜಯನಗರ, ರಾಯಚೂರು, ವಿಜಯಪುರದಲ್ಲಿ ಹೆಚ್ಚಿನ ಮಳೆ ಸುರಿದಿದೆ.

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಭಾನುವಾರ ತಡರಾತ್ರಿ ಮನೆಯ ಚಾವಣಿ ಕುಸಿದು, ಮನೆಯಲ್ಲಿ ಮಲಗಿದ್ದ ಸಂಗೀತಾ (30) ಎಂಬುವರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಮನೆ ಸೋರುತ್ತಿದ್ದು, ಈ ವೇಳೆ ಇವರ ಪತಿ ಹಾಗೂ ಮಕ್ಕಳು ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಹೊಲಕ್ಕೆ ತೆರಳಿದ್ದಾಗ ಸಿಡಿಲು ಬಡಿದು ಕೆ.ಚಂದ್ರಶೇಖರ (29) ಎಂಬುವರು ಮೃತಪಟ್ಟಿದ್ದಾರೆ. ಅವರ ಜತೆಗಿದ್ದ ಅವರ ಗೆಳೆಯ ಮಹೇಂದ್ರ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳಲ್ಲಿ ಮಳೆಯಿಂದ ಎರಡು ಮನೆಗಳು ಬಿದ್ದಿವೆ. ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ರಾಯಚೂರಿನ ವಿವಿಧೆಡೆ ಬಿರುಗಾಳಿ ಸಹಿತ ಮಳೆಗೆ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ದಾಳಿಂಬೆ ತೋಟ ನಾಶವಾಗಿದೆ. ಇದೇ ವೇಳೆ, ಗದಗ, ಹುಬ್ಬಳ್ಳಿ, ಹಾವೇರಿ, ಬೆಂಗಳೂರು, ಧಾರವಾಡ ಜಿಲ್ಲೆಗಳಲ್ಲಿಯೂ ಮಳೆಯಾದ ವರದಿಯಾಗಿದೆ.

ಧಾರವಾಡ ಜಿಲ್ಲೆ ನವಲಗುಂದದಲ್ಲಿನ ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳು ನೀರಲ್ಲಿ ಮುಳುಗಿ ಜನ ಪರದಾಡುವಂತಾಗಿದೆ. ಪಟ್ಟಣದ ಹೊರವಲಯದಲ್ಲಿರುವ ಅಂಬಲಿ ಹಳ್ಳವು ತುಂಬಿ ಹರಿಯುತ್ತಿದ್ದು, ರೋಣ ಮಾರ್ಗ ಸಂಪೂರ್ಣ ಸ್ಥಗಿತಗೊಂಡಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ತಾಲೂಕಿನ ಕೆಲವು ಗ್ರಾಮಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.