ಕಂಪ್ಲಿ ಬಸ್‌ ನಿಲ್ದಾಣ ಬಳಿಯ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಬಿ.ಎಚ್.ಎಂ.ಗುರುಶಾಂತ ಶಾಸ್ತ್ರಿ

ಕಂಪ್ಲಿ: ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ತೀವ್ರವಾಗಿ ವಿಳಂಬವಾಗಿದ್ದು, ಸಾರ್ವಜನಿಕರು ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ರಸ್ತೆ ಅಕ್ಕಪಕ್ಕದ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಬಸ್ ನಿಲ್ದಾಣದಿಂದ ಆರಂಭವಾಗಿ ಮಾರುತಿ ನಗರ, ನಂ.10 ಮುದ್ದಾಪುರ ವರೆಗೆ ಒಟ್ಟು ಸುಮಾರು 2 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 2024-25ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಸುಮಾರು ₹4 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗೆ 2025ರ ಸೆಪ್ಟೆಂಬರ್ 2ರಂದು ಶಾಸಕ ಜೆ.ಎನ್. ಗಣೇಶ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.

ಕಾಮಗಾರಿಗೆ ಚಾಲನೆ ನೀಡಿ ಎರಡು–ಮೂರು ತಿಂಗಳು ಕಳೆದರೂ ರಸ್ತೆ ನಿರ್ಮಾಣ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ರಸ್ತೆ ಸಂಪೂರ್ಣವಾಗಿ ಕಿತ್ತು ಹಾಕಲಾಗಿದ್ದು, ಕೇವಲ ಕಲ್ಲುಗಳನ್ನು ಹಾಕಿ ಬಿಟ್ಟಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ, ರಸ್ತೆ ಧೂಳಿನಿಂದ ಆವರಿಸಿಕೊಂಡಿದ್ದು, ವಾಹನ ಸವಾರರು ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ.

ರಸ್ತೆ ಅಕ್ಕಪಕ್ಕದಲ್ಲಿರುವ ನಿವಾಸಿಗಳು ದಿನನಿತ್ಯ ಧೂಳಿನಲ್ಲೇ ಜೀವನ ಸಾಗಿಸಬೇಕಾದ ಸ್ಥಿತಿ ಇದೆ. ಧೂಳಿನ ಕಾರಣದಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಿ ಕಾಮಗಾರಿ ಚುರುಕುಗೊಳಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೇ ಕಾಮಗಾರಿ ಸಂಪೂರ್ಣ ಗುಣಮಟ್ಟದಲ್ಲಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿಯಮಿತವಾಗಿ ನೀರು ಸಿಂಪಡಿಸಿ ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಒಂದು ವೇಳೆ ಅಧಿಕಾರಿಗಳು ಈ ಸಮಸ್ಯೆಗಳನ್ನು ನಿರ್ಲಕ್ಷ ಮಾಡಿದರೆ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಸುಗಮ ಸಂಚಾರ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.ತ್ವರಿತ ಕಾಮಗಾರಿ ಪೂರ್ಣಗೊಳಿಸಿ

ಮಗಾರಿಗೆ ಚಾಲನೆ ನೀಡಿ ಹಲವು ತಿಂಗಳು ಕಳೆದಿದ್ದರೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರತಿದಿನವೂ ವಾಹನ ಸವಾರರು ಸಂಚಾರಕ್ಕೆ ತೀರಾ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಮನಹರಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಕಾಮಗಾರಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಾರುತಿ ನಗರ ನಿವಾಸಿ ಎಚ್. ಅಂಬರೀಷ್ ಆಗ್ರಹಿಸಿದ್ದಾರೆ.ಅಂತಿಮ ಸ್ಪರ್ಶ

ಈಗಾಗಲೇ ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಮುಂದಿನ ಒಂದು ವಾರದೊಳಗಾಗಿ ರಸ್ತೆ ಡಾಂಬರೀಕರಣ ಕಾರ್ಯವನ್ನು ಪೂರ್ಣಗೊಳಿಸಿ ಸಂಪೂರ್ಣ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುವುದು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ ಎಂದು ಪಿಡಬ್ಲ್ಯೂಡಿ ಎಇ ಆನಂದ್ ಪೆಮ್ಮಾರ್ ತಿಳಿಸಿದ್ದಾರೆ.