ನೀರಿನ ಸಮಸ್ಯೆ ಬಗ್ಗೆ 2 ಬಾರಿ ಪತ್ರಬರೆದರೂ ಕ್ಯಾರೇ ಎನ್ನದ ಸಿಎಂ: ಮುನಿರಾಜು

| Published : Mar 27 2024, 02:01 AM IST / Updated: Mar 27 2024, 01:17 PM IST

ನೀರಿನ ಸಮಸ್ಯೆ ಬಗ್ಗೆ 2 ಬಾರಿ ಪತ್ರಬರೆದರೂ ಕ್ಯಾರೇ ಎನ್ನದ ಸಿಎಂ: ಮುನಿರಾಜು
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಕ್ಷೇತ್ರದ ನೀರಿನ ಸಮಸ್ಯೆ ಬಗೆಹಾರ ಕೋರಿ ಸಿಎಂ ಮತ್ತು ಡಿಸಿಎಂ ಅವರಿಗೂ ಎರಡು ಬಾರಿ ಪತ್ರ ಬರೆದು ಗಮನ ಸೆಳೆದಿದ್ದೇನೆ. ಆದರೂ ಪ್ರಯೋಜನವಾಗಿಲ್ಲ ಎಂದು ಶಾಸಕ ಎಸ್.ಮುನಿರಾಜು ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ನಮ್ಮ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಸಕ ಎಸ್.ಮುನಿರಾಜು ತಿಳಿಸಿದರು.

ಶೆಟ್ಟಿಹಳ್ಳಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ 6 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಎಲ್ಲಿ ಹೋದರೂ ನೀರಿನ ಹಾಹಾಕಾರವಿದೆ. 

ಬಗೆಹರಿಸಲು ಈಗಾಗಲೇ ಜಲಮಂಡಳಿ ಅಧ್ಯಕ್ಷರು, ಅಧಿಕಾರಿಗಳನ್ನು ಸಭೆ ನಡೆಸಿ ಗಮನಕ್ಕೆ ತಂದಿದ್ದೆವು. ಸಿಎಂ ಮತ್ತು ಡಿಸಿಎಂ ಅವರಿಗೂ ಎರಡು ಬಾರಿ ಪತ್ರ ಬರೆದು ಗಮನ ಸೆಳೆದಿದ್ದೇನೆ. ಆದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಲ ಮಂಡಳಿಯ ಟ್ಯಾಂಕ್‌ ನೀರು ಯಾವುದೋ ಒಂದು ರಸ್ತೆಯಲ್ಲಿ ಇಟ್ಟರೆ ನೀರನ್ನು ಮಹಡಿಗಳಲ್ಲಿ ವಾಸ ಮಾಡುತ್ತಿರುವವರು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. 

ವಯಸ್ಸಾದವರು, ಮಹಿಳೆಯರು ನೀರನ್ನು ಕೊಂಡೊಯ್ಯಲಾಗುತ್ತಿಲ್ಲ. ಇದಕ್ಕಾಗಿ ಮತ್ತೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಈಗಾಗಲೇ 100 ಬೋರ್ವೆಲ್‌ಗಳನ್ನು ಕೇಳಿದ್ದೆ. ಅವುಗಳನ್ನು ಕೊಟ್ಟಿದ್ದರೆ ಅಲ್ಪಮಟ್ಟಿಗಾದರೂ ಬೇಸಿಗೆಯ ನೀರಿನ ಬವಣೆ ತಪ್ಪಿಸಬಹುದಾಗಿತ್ತು. ಆದರೆ ಇದು ಕಿವುಡ ಮತ್ತು ಕುರುಡ ಸರ್ಕಾರ. 

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದ ಪರಿಣಾಮ ಈಗ ಜಲಕ್ಷಾಮ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಪರಿಸ್ಥಿತಿ ಹದಗೆಟ್ಟಿದ್ದು ಜನರು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಕಾವೇರಿ ಐದನೇ ಹಂತ ಕಾಮಗಾರಿ ತ್ವರಿತ ಗತಿಯಲ್ಲಿ ಆಗಿದ್ದರೆ ಸ್ವಲ್ಪಮಟ್ಟಿಗಾದರೂ ಸಮಸ್ಯೆ ಬಗೆಹರಿಯುತ್ತಿತ್ತು. 

ಇತ್ತ ಬೋರ್ವೆಲ್‌ಗಳು ಬತ್ತಿವೆ, ಕಾವೇರಿ ನೀರು ಕೂಡ ಬರುತ್ತಿಲ್ಲ, ಜನರು ನೀರಿನ ಹಾಹಾಕಾರದಿಂದ ತತ್ತರಿಸಿದ್ದಾರೆ ಎಂದರು. ಈಗಲಾದರೂ ಸರ್ಕಾರ ಎಚ್ಚೆತ್ತು ಈ ಕ್ಷೇತ್ರಕ್ಕೆ ನೀರಿನ ಸಮಸ್ಯೆ ಬಗೆಹರಿಸಲಿ ಎಂದು ಮತ್ತೊಮ್ಮೆ ಮನವಿ ಮಾಡಿದರು.

ಖಾಸಗಿಯವರು ಕೂಡ ಕೊಳವೆಬಾವಿ ಕೊರೆಸುವಾಗ ಜಲ ಮಂಡಳಿ ಅನುಮತಿ ಪಡೆದು ಕೊರೆಸಬೇಕು. ಇಲ್ಲವಾದಲ್ಲಿ ಅಕ್ಕಪಕ್ಕದವರು, ಸಾರ್ವಜನಿಕರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಎಸ್‌.ಮುನಿರಾಜು ಹೇಳಿದರು.