ಚಿಕಿತ್ಸೆ ಫಲಿಸದೇ ಮತ್ತೆ2 ಕೃಷ್ಣಮೃಗಗಳ ಸಾವು

| Published : Nov 18 2025, 12:45 AM IST

ಸಾರಾಂಶ

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿನ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಾಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿನ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿದಿದೆ. ಅನಾರೋಗ್ಯಕ್ಕೀಡಾಗಿದ್ದ ಮತ್ತೆರಡು ಕೃಷ್ಣ ಮೃಗಗಳು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿವೆ. ಇದರಿಂದಾಗಿ ಮೃತ ಕೃಷ್ಣಮೃಗಗಳ ಸಂಖ್ಯೆ 31ಕ್ಕೆ ಏರಿದಂತಾಗಿದೆ. ಬ್ಯಾಕ್ಟೀರಿಯಾ ಇನ್‌ಫೆಕ್ಷನ್‌ನಿಂದಲೇ ಕೃಷ್ಣಮೃಗಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಒಟ್ಟು 38 ಕೃಷ್ಣಮೃಗಗಳ ಪೈಕಿ ಈಗ 7 ಕೃಷ್ಣಮೃಗಗಳು ಮಾತ್ರ ಉಳಿದಿದ್ದು, ಅವುಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೆ, ಕೃಷ್ಣಮೃಗಗಳು ಮೃತಪಟ್ಟ ಪ್ರದೇಶವನ್ನು ಮೃಗಾಲಯದ ಸಿಬ್ಬಂದಿ ನಿರ್ಬಂಧಿಸಿದ್ದಾರೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಗ್ರೀನ್ ಮ್ಯಾಟ್ ಕಟ್ಟಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧಿಸಲಾಗಿದೆ.ಕೊರೋನಾ ರೀತಿ ಸೋಂಕಿಂದ ಸಾವು: ಸತೀಶ ಜಾರಕಿಹೊಳಿಕೃಷ್ಣಮೃಗಗಳ ಸಾವಿಗೆ ಕೊರೋನಾ ಮಾದರಿಯ ಸೋಂಕು ಕಾರಣವಾಗಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕೃಷ್ಣಮೃಗಗಳ ಸಾವಿನ ಹಿನ್ನೆಲೆಯಲ್ಲಿ ಸೋಮವಾರ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕೃಷ್ಣಮೃಗಗಳ ರಕ್ಷಣೆಗೆ ಮತ್ತು ಈ ನಿಗೂಢ ಸಾವುಗಳಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತಕ್ಷಣವೇ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಈವರೆಗೆ 31 ಕೃಷ್ಣಮೃಗಗಳು ಸಾವನ್ನಪ್ಪಿವೆ. ಇವುಗಳ ಸಾವಿಗೆ ಸಾಂಕ್ರಾಮಿಕ ರೋಗ ಕಾರಣವಿರಬಹುದು. ಮೃತ ಕೃಷ್ಣಮೃಗಗಳ ಮಾದರಿ ಸಂಗ್ರಹಿಸಿ, ಲ್ಯಾಬ್‌ಗೆ ಕಳುಹಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಆಗ ಸಾವಿಗೆ ಏನು ಕಾರಣ ಎಂಬುದು ನಿಖರವಾಗಿ ಗೊತ್ತಾಗಲಿದೆ ಎಂದು ಹೇಳಿದರು.

ಅರಣ್ಯಾಧಿಕಾರಿಗಳು ಈಗಾಗಲೇ ಕೃಷ್ಣಮೃಗಗಳ ಸಾವಿನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದಿಂದ ನುರಿತ ವೈದ್ಯರು ಬಂದಿದ್ದಾರೆ. ವೈದ್ಯರು ವರದಿ ನೀಡಿದ ಬಳಿಕ ಸರ್ಕಾರ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.