ಜಿಲ್ಲೆಗೆ ಎರಡು ತಾಯಿ-ಮಗು ಆಸ್ಪತ್ರೆ ಮಂಜೂರು: ಸಚಿವ ತಿಮ್ಮಾಪುರ

| Published : Jun 29 2024, 12:41 AM IST / Updated: Jun 29 2024, 01:22 PM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಹುನಗುಂದ ತಾಲೂಕಿಗೆ ಸರ್ಕಾರಿ ತಾಯಿ-ಮಗುವಿನ ಆಸ್ಪತ್ರೆ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

  ಬಾಗಲಕೋಟೆ :  ಜಿಲ್ಲೆಯ ಮುಧೋಳ ಹಾಗೂ ಹುನಗುಂದ ತಾಲೂಕಿಗೆ ಸರ್ಕಾರಿ ತಾಯಿ-ಮಗುವಿನ ಆಸ್ಪತ್ರೆ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳ ಮತ್ತು ಹುನಗುಂದದಲ್ಲಿ ಕಾರ್ಯಕ್ಷೇತ್ರ ಹೆಚ್ಚಾಗಿರುವುದರಿಂದ ಹೆಚ್ಚುವರಿಯಾಗಿ ಎರಡು ಆಸ್ಪತ್ರೆ ಮಂಜೂರಾತಿಗೆ ಕ್ರಮ ವಹಿಸಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಸಿಟಿ ಸ್ಕ್ಯಾನಿಂಗ್ ಘಟಕ ಇದ್ದು, ಎಂ.ಆರ್.ಐ ಘಟಕ ಅವಶ್ಯಕತೆ ಇರುವುದನ್ನು ಮನಗಂಡಿದ್ದು, ಮುಂಬರುವ 2-3 ತಿಂಗಳ ಒಳಗಾಗಿ ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತವಾಗಿ ಸೇವೆ ದೊರೆಯುವಂತೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಸೇವೆ ಬಗ್ಗೆ ಶೇ.80ರಷ್ಟು ತೃಪ್ತಿದಾಯಕವಾಗಿದೆ. ನೂರಕ್ಕೆ ನೂರರಷ್ಟು ಮಾಡುವ ಉದ್ದೇಶದಿಂದ 2-3 ತಿಂಗಳ ಒಳಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ಔಷಧ ಹಾಗೂ ಪ್ರಯೋಗಾಲಯ ಸೇರಿ ಎಲ್ಲ ತಪಾಸಣೆಗಳು ಇಲ್ಲಿಯೇ ದೊರೆಯುವಂತೆ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೊರರೋಗಿ, ಒಳರೋಗಿಗಳ ಸಂಖ್ಯೆ, ವಾರ್ಡ್‌ಗಳ ಸಂಖ್ಯೆ, ವೈದ್ಯರ ಕರ್ತವ್ಯಗಳ ಮೇಲೆ ತೀವ್ರ ನಿಗಾವಹಿಸುವ ಕಾರ್ಯ ಮಾಡಲಾಗುವುದು ಎಂದರು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ. ವೈದ್ಯರು ಹಾಗೂ ತಜ್ಞ ವೈದ್ಯರ ಕೊರತೆ ಹೆಚ್ಚಾಗಿದೆ. ಕೌನ್ಸೆಲಿಂಗ್ ಮೂಲಕ ತಜ್ಞ ವೈದ್ಯರನ್ನು ಹಾಕಲಾಗುತ್ತಿದೆ. ಕೆಲವವರು ಜೆಡಿಒ ಆಗಿ ಕೆಲಸ ಮಾಡುತ್ತಿದ್ದು, ಅವರನ್ನು ಸಹ ಮರಳಿ ಕರೆಸಲಾಗುತ್ತಿದೆ. ಅರೆ ವೈದ್ಯಕೀಯ ಸಿಬ್ಬಂದಿಗಳಾದ ನರ್ಸ್‌, ಟೆಕ್ನಿಷಿಯನ್ ಹಾಗೂ ಫಾರ್ಮಸಿ ಅಧಿಕಾರಿ ಹುದ್ದೆಗಳು ಸಾಕಷ್ಟು ಖಾಲಿ ಇವೆ. ಹೊರಗುತ್ತಿಗೆ ಮೇಲೆ ಭರ್ತಿಗೆ ಎಫ್‌ಡಿಎನಿಂದ ಅನುಮತಿ ಪಡೆಯಬೇಕಿದೆ. ಆದರೆ, ಶೇ.75ರಷ್ಟು ಗ್ರೂಫ್ ಡಿ ಹುದ್ದೆ ಹೊರಗುತ್ತಿಗೆ ಮೇಲೆ ಭರ್ತಿ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಪ್ರತಿಯೊಂದು ಚಿಕಿತ್ಸೆಗೆ ನಿಗದಿಡಪಸಿದ ದರಪಟ್ಟಿಯನ್ನು ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಶಾಸಕರಾದ ಎಚ್.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ ಸೇರಿದಂತೆ ಇತರರು ಇದ್ದರು.