ಕನ್ನಡಪ್ರಭ ವಾರ್ತೆ ವಿಜಯಪುರ

ಕೆ.ಬಿ.ಜೆ.ಎನ್.ಎಲ್. ಕೆನಾಲ್ ಕಾಮಗಾರಿ ಪೂರೈಸಿದ್ದರ ಬಿಲ್ ಎಂ.ಬಿ. ಬರೆದು ಬಿಲ್ ಮಂಜೂರಾತಿಗಾಗಿ ಝಳಕಿ ವಿಭಾಗಕ್ಕೆ ಕಳುಹಿಸಲು ₹10,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕೃ.ಭಾ.ಜ.ನಿ.ನಿ. ಉಪವಿಭಾಗ ನಂ.1 ಸಾಲೋಟಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ ಚವ್ಹಾಣ ಹಾಗೂ ₹8,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕಚೇರಿಯ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಅವರು ಸಾಲೋಟಗಿ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಕೆ.ಬಿ.ಜೆ.ಎನ್.ಎಲ್. ಕೆನಾಲ್ ಕಾಮಗಾರಿ ಪೂರೈಸಿದ್ದರ ಬಿಲ್ ₹3,71,419 ಎಂ.ಬಿ. ಬರೆದು ಬಿಲ್ ಮಂಜೂರಾತಿಗಾಗಿ ಝಳಕಿ ವಿಭಾಗಕ್ಕೆ ಕಳುಹಿಸಲು ಲಂಚ ಕೇಳಿದ್ದರು. ನಾನಾಸಾಹೇಬ ರೂಡಗಿ ಅವರ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ ಮಾರ್ಗದರ್ಶನದದಲ್ಲಿ ಹಾಗೂ ಡಿವೈಎಸ್‌ಪಿ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಆನಂದ ಟಕ್ಕನ್ನವರ, ಆನಂದ ಡೋಣಿ, ನಿಂಗಪ್ಪ ಪೂಜೇರಿ ಹಾಗೂ ಲೋಕಾಯುಕ್ತ ಪೊಲೀಸ್ ಠಾಣೆ ಸಿಬ್ಬಂದಿ ಪಾಲ್ಗೊಂಡಿದ್ದರು.