ಕಾಂಗ್ರೆಸ್‌ ಲೋಕಸಭೆ ಪ್ರಚಾರ, ಪ್ರವಾಸಕ್ಕೆ ಇಬ್ಬರು ಉಸ್ತುವಾರಿ

| Published : Mar 18 2024, 01:47 AM IST / Updated: Mar 18 2024, 09:11 AM IST

DK Shivakumar

ಸಾರಾಂಶ

ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ನಾಯಕರ ಪ್ರಚಾರ ಕಾರ್ಯಕ್ರಮಗಳ ಆಯೋಜನೆ ಹಾಗೂ ಪ್ರವಾಸ ಕಾರ್ಯಕ್ರಮಗಳ ಜವಾಬ್ದಾರಿ ನಿರ್ವಹಿಸಲು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್‌ ಮತ್ತು  ಬಸವರಾಜ ರಾಯರಡ್ಡಿ ಅವರನ್ನು ರಾಜ್ಯಮಟ್ಟದ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವು ನಾಯಕರ ಪ್ರಚಾರ ಕಾರ್ಯಕ್ರಮಗಳ ಆಯೋಜನೆ ಹಾಗೂ ಪ್ರವಾಸ ಕಾರ್ಯಕ್ರಮಗಳ ಜವಾಬ್ದಾರಿ ನಿರ್ವಹಿಸಲು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್‌ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರನ್ನು ರಾಜ್ಯಮಟ್ಟದ ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಿದೆ.

ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಆದೇಶ ಹೊರಡಿಸಿದ್ದು, ರಾಜ್ಯದ ಮಟ್ಟಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಹದಿನಾಲ್ಕು ಕ್ಷೇತ್ರಗಳಿಗೆ ಜಿ.ಸಿ. ಚಂದ್ರಶೇಖರ್‌ ಹಾಗೂ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಹದಿನಾಲ್ಕು ಕ್ಷೇತ್ರಗಳಿಗೆ ಬಸವರಾಜ ರಾಯರಡ್ಡಿ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ವಾರದೊಳಗೆ ಪ್ರವಾಸ ನಕ್ಷೆ ವರದಿ: ಉಸ್ತುವಾರಿಗಳು ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರವಾಸ ಕಾರ್ಯಕ್ರಮದ ಮಾರ್ಗಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು. 

ಹೀಗಾಗಿ ಕೂಡಲೇ ಜವಾಬ್ದಾರಿ ವಹಿಸಿಕೊಂಡು ಸ್ಥಳೀಯ ಮುಖಂಡರ ಸಹಯೋಗದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರವಾಸ ಮಾರ್ಗ ಹಾಗೂ ನಕ್ಷೆಯನ್ನು ಸಿದ್ಧಪಡಿಸಿ ವಾರದೊಳಗೆ ಸಲ್ಲಿಸಲು ಡಿ.ಕೆ. ಶಿವಕುಮಾರ್‌ ಅವರು ಸೂಚಿಸಿದ್ದಾರೆ.

ಚಂದ್ರಶೇಖರ್‌ ಅವರಿಗೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು-ಕೊಡಗು, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ಹಾಸನ, ತುಮಕೂರು ಕ್ಷೇತ್ರಗಳ ಉಸ್ತುವಾರಿ ವಹಿಸಲಾಗಿದೆ.

ಉಳಿದಂತೆ ರಾಯರಡ್ಡಿ ಅವರಿಗೆ ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಬಾಗಲಕೋಟೆ, ಬೀದರ್‌, ವಿಜಯಪುರ, ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೆಳಗಾವಿ, ಚಿಕ್ಕೋಡಿ ಉಸ್ತುವಾರಿ ನೀಡಲಾಗಿದೆ.