ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇರುವ ಒಂದೇ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ ಇಬ್ಬರಿಗೆ ಸ್ಟಂಟ್ ಅಳವಡಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ ಇಲ್ಲದೆ ಇರುವುದರಿಂದ ನಗರದ ಖಾಸಗಿ ಕೆ.ಎಸ್. ಆಸ್ಪತ್ರೆಯನ್ನೇ ರೋಗಿಗಳು ಆಶ್ರಯಿಸಿದ್ದಾರೆ.
ಪ್ರತಿ ತಿಂಗಳು ಸರಾಸರಿ 50-60ಕ್ಕೂ ಹೆಚ್ಚು ಸ್ಟಂಟ್ ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ ಎರಡರಿಂದ ನಾಲ್ಕು ಜನ ಎದೆನೋವಿನಿಂದ ಬಳಲುತ್ತಾ ಬರುತ್ತಾರೆ. ಅದರಲ್ಲಿ ಕನಿಷ್ಠ ಇಬ್ಬರಿಗಾದರೂ ಸ್ಟಂಟ್ ಅಳವಡಿಸಲಾಗುತ್ತದೆ. ಇನ್ನುಳಿದಂತೆ ಚಿಕಿತ್ಸೆ ನೀಡಿ ಕಳುಹಿಸಲಾಗುತ್ತದೆ. ಇದು ಕೇವಲ ಒಂದು ಖಾಸಗಿ ಆಸ್ಪತ್ರೆಯ ಲೆಕ್ಕಚಾರವಾಗಿದ್ದು, ಇತರೆ ಆಸ್ಪತ್ರೆಯಲ್ಲಿಯೂ ಎದೆನೋವಿನಿಂದ ಬಳಲುತ್ತಿರುವವರು ದಾಖಲಾಗಿ ಇಸಿಜಿ ಮಾಡಿಸಿಕೊಂಡು, ತುರ್ತು ಚಿಕಿತ್ಸೆ ಪಡೆದು ಬೇರೆಡೆಗೂ ಹೋಗುತ್ತಾರೆ.ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆಯೇನು ಅಘಾತವಾಗುವಂತೆ ಇಲ್ಲ. ಕಳೆದ ಮೂರು ತಿಂಗಳಲ್ಲಿ 14 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದು, ಕೇವಲ ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ಆಗಿರುವ ಲೆಕ್ಕಚಾರ ಮಾತ್ರ. ಉಳಿದಂತೆ ವಿವಿಧೆಡೆ ಚಿಕಿತ್ಸೆಗೆ ತೆರಳಿದವರು ಮತ್ತು ಅದರಲ್ಲಿ ಮೃತಪಟ್ಟವರ ಸಂಖ್ಯೆಯೂ ಲೆಕ್ಕಕ್ಕೆ ಲಭ್ಯವಿಲ್ಲ.
700 ಜನರಿಗೆ ಸ್ಟಂಟ್ ಅಳವಡಿಕೆ:ಕೊಪ್ಪಳದ ಕೆಎಸ್ ಆಸ್ಪತ್ರೆಯಲ್ಲಿ ಕಳೆದೊಂದು ವರ್ಷದಿಂದ ಹೃದಯಾಘಾತಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತ್ಯೇಕ ವಿಭಾಗವನ್ನೇ ತೆರೆಯಲಾಗಿದೆ. ಇಲ್ಲಿ ಸ್ಟಂಟ್ ಅಳವಡಿಕೆ, ಮಾಸ್ಕ್ ಅಳವಡಿಕೆ ಚಿಕಿತ್ಸೆ ಲಭ್ಯವಿದ್ದು ಬೈಪಾಸ್ ಸರ್ಜರಿ ಚಿಕಿತ್ಸೆ ಲಭ್ಯವಿಲ್ಲ. ಕಳೆದೊಂದು ವರ್ಷದಲ್ಲಿ ಬರೋಬ್ಬರಿ 700ಕ್ಕೂ ಹೆಚ್ಚು ಜನಿರಿಗೆ ಸ್ಟಂಟ್ ಅಳವಡಿಸಲಾಗಿದೆ ಎನ್ನುವುದು ಆಸ್ಪತ್ರೆಯ ಮಾಹಿತಿ.
ಗ್ರಾಮೀಣ ಪ್ರದೇಶದವರೇ ಹೆಚ್ಚು:ಅಚ್ಚರಿ ಎಂದರೇ ಹೃದಯಾಘಾತಕ್ಕೆ ತುತ್ತಾಗುವವರಲ್ಲಿ ಮತ್ತು ಸ್ಟಂಟ್ ಅಳವಡಿಸಿಕೊಳ್ಳುತ್ತಿರುವವರಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದವರೇ ಹೆಚ್ಚಾಗಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಅದರಲ್ಲೂ ಕೃಷಿ ಚಟುವಟಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸಹ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಒಕ್ಕಲುತನ ಮಾಡುತ್ತಾ, ಹೊಲದಲ್ಲಿ ಕೆಲಸ ಮಾಡುವವರಿಗೂ ಸ್ಟಂಟ್ ಅಳವಡಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಚಿಕಿತ್ಸೆ ಇಲ್ಲ:ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಯಲ್ಲಿ ಒಬ್ಬರೇ ಒಬ್ಬರು ಪಿಜಿಸಿಯನ್ ವೈದ್ಯರಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯೂ ಲಭ್ಯವಾಗುತ್ತಿದೆ. ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ತುರ್ತು ಚಿಕಿತ್ಸೆ ದೊರೆಯುತ್ತಿದೆಯಾದರೂ ಇಲ್ಲಿಯೂ ಹೆಚ್ಚಿನ ಚಿಕಿತ್ಸೆ ಇಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಳಗಾದವರಿಗೆ ಖಾಸಗಿ ಆಸ್ಪತ್ರೆಯೇ ಆಸರೆಯಾಗಿದೆ.
ಈ ಹಿಂದೆ ಅದು ಸಹ ಇರಲಿಲ್ಲ, ಪಕ್ಕದ ಗದಗ ಅಥವಾ ಹುಬ್ಬಳ್ಳಿಗೆ ತೆರಳಬೇಕಾಗಿತ್ತು. ಹೀಗಾಗಿ, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಯೂ ಹೃದಯ ಚಿಕಿತ್ಸಾ ವಿಭಾಗ ತೆರೆಯುವಂತೆ ಆಗ್ರಹವೂ ಇದೆ.ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲ. ಒಬ್ಬರೂ ಸಹ ಪಿಜಿಸಿಯನ್ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ.ಡಾ. ಲಿಂಗರಾಜ ಟಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೊಪ್ಪಳ ಹೃದಯಾಘಾತಗಳ ಸಂಖ್ಯೆಯೇನು ಅಷ್ಟೇನು ಹೆಚ್ಚಾಗಿಲ್ಲ. ಆದರೆ, ನಮ್ಮ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 50ರಿಂದ 60 ಜನರಿಗೆ ಸ್ಟಂಟ್ ಅಳವಡಿಸುತ್ತಿದ್ದೇವೆ.
ಡಾ. ಬಸವರಾಜ ಕೆ.ಎಸ್. ಆಸ್ಪತ್ರೆ ಕೊಪ್ಪಳ