ಸಾರಾಂಶ
ಪಟ್ಟಣದ ನ್ಯಾಯಾಲಯದ ಪಕ್ಕದ ಕ್ಯಾಂಟಿನಲ್ಲಿ ವ್ಯಕ್ತಿಗಳಿಬ್ಬರಿಗೆ ಸ್ಕೂಲ್ ಡ್ರೈವರ್ ಒಬ್ಬ ಇರಿದು ಹಲ್ಲೆ ನಡೆಸಿರುವ ಸಂಬಂಧ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ನ್ಯಾಯಾಲಯದ ಪಕ್ಕದ ಕ್ಯಾಂಟಿನಲ್ಲಿ ವ್ಯಕ್ತಿಗಳಿಬ್ಬರಿಗೆ ಸ್ಕೂಲ್ ಡ್ರೈವರ್ ಒಬ್ಬ ಇರಿದು ಹಲ್ಲೆ ನಡೆಸಿರುವ ಸಂಬಂಧ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದರು. ಕೃಷ್ಣರಾಜಪೇಟೆ ತಾಲೂಕಿನ ಸಾಸಲು ಗ್ರಾಮದ ನಂಜಪ್ಪ (40) ಹಲ್ಲೆ ನಡೆಸಿದ ಆರೋಪಿ. ಮೈಸೂರಿನ ಕುಮಾರಸ್ವಾಮಿ ಮತ್ತು ನಂಜನಗೂಡಿನ ಬಿ.ಆರ್ ಉಮೇಶ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೈಸೂರಿನ ಎನ್.ಆರ್ ಮೊಹಲ್ಲಾ ನಿವಾಸಿ ಎನ್. ಯತೀಶ್ ಎಂಬುವವರು ಠಾಣೆಗೆ ದೂರು ನೀಡಿ, ನಾವು ಕುಟುಂಬ ಸಮೇತ ಪಟ್ಟಣದ ನ್ಯಾಯಾಲಯಕ್ಕೆ ಹಾಜರಾಗಿದ್ದೆವು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಕೆಲಸ ಮುಗಿಸಿ ನಮ್ಮ ಮಾವ ಮೈಸೂರಿನ ಕುಮಾರಸ್ವಾಮಿ ಮತ್ತು ಸ್ನೇಹಿತರಾದ ಬಿ.ಆರ್ ಉಮೇಶ್ ಇವರು ನ್ಯಾಯಾಲಯದ ಪಕ್ಕದಲ್ಲಿರುವ ಕ್ಯಾಂಟಿನ್‌ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ನಂಜಪ್ಪ ಎಂಬುವವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ದೇಹದ ಸುಮಾರು ಭಾಗಗಲ್ಲಿ ಚುಚ್ಚಿ ರಕ್ತ ಬರುವಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ನಂಜಪ್ಪರವರ ಮಾವ ರಾಜೇಂದ್ರ, ಅತ್ತೆಯಾದ ಮಂಜುಳ, ಪತ್ನಿಯಾದ ಪಾರ್ವತಿ ಈ ನಾಲ್ವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಮಂಗಳವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು.