ತಾಲ್ಲೂಕಿನ ಗರಗ ಮೀಸಲು ಅರಣ್ಯ ಸಂರಕ್ಷಣಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಅರಣ್ಯದ ಸುತ್ತಲೂ ತಂತಿ ಬೇಲಿ ಅಳವಡಿಸಲು ೨.೫ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದು ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ತಾಲ್ಲೂಕಿನ ಗರಗ ಮೀಸಲು ಅರಣ್ಯ ಸಂರಕ್ಷಣಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಅರಣ್ಯದ ಸುತ್ತಲೂ ತಂತಿ ಬೇಲಿ ಅಳವಡಿಸಲು ೨.೫ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದು ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.

ಇಲ್ಲಿ ಶುಕ್ರವಾರ ಗರಗ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪ್ರಾಕೃತಿಕ ಸಂಪತ್ತಾಗಿರುವ ನಮ್ಮ ಕಾಡುಗಳನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಎಲ್ಲಡೆ ದಟ್ಟವಾಗಿ ಬೆಳೆದಿದ್ದ ಕಾಡುಗಳು ನಶಿಸಿ ಹೋಗುತ್ತಿರುವುದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿದೆ ಎಂದು ವಿಷಾದಿಸಿದರು.

ಗರಗ ಅರಣ್ಯ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸುವುದರಿಂದ ಕಾಡುಪ್ರಾಣಿಗಳು ಅರಣ್ಯ ಬಿಟ್ಟು ಹೊರಗೆ ಹೋಗದಂತೆ ತಡೆಯುವ ಉದ್ದೇಶವೂ ಇದೆ. ಗರಗ ಮೀಸಲು ಅರಣ್ಯದಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, ದನ, ಕರುಗಳು ಸಸಿಗಳನ್ನು ತಿನ್ನದಂತೆ ತಡೆಯುವ ಉದ್ದೇಶವೂ ಇದೆ. ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ತಂತಿಬೇಲಿ ಅಳವಡಿಸುವುದರಿಂದ ಒತ್ತುವರಿಯಾಗದಂತೆ ತಡೆದು ಕಾಡು ಸಂರಕ್ಷಿಸಬಹುದು ಎಂದರು.

ಪರಿಸರ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಕಾಡು ಉಳಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯುತ್ತದೆ. ಆದ್ದರಿಂದ ಅರಣ್ಯ ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲೆ ಇದೆ. ಮೊದಲ ಹಂತದಲ್ಲಿ ತಂತಿಬೇಲಿ ಅಳವಡಿಸಲಾಗುತ್ತಿದ್ದು, ಮುಂದೆ ಪ್ರಾಣಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಸಲಾಗುವುದು ಎಂದರು.

ವಲಯ ಅರಣ್ಯಾಧಿಕಾರಿ ಎಂ.ಟಿ.ರಾಮಚಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಬಿ.ಕುಮಾರ್, ಗಿರೀಶ್, ಪ್ರವೀಣ್, ಮಂಜುನಾಥ್ ಇದ್ದರು.