ದೇಶದ ಭದ್ರತೆಗೆ ಎರಡು ಶ್ವಾನದ ಮರಿ ಕೊಡುಗೆ

| Published : May 05 2025, 12:45 AM IST

ಸಾರಾಂಶ

ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಾಗಿದೆ. ದೇಶದಲ್ಲಿ ಯುದ್ಧ ಕವಿದ ವಾತಾವರಣ ಇದೆ.

ಕಾರವಾರ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಾಗಿದೆ. ದೇಶದಲ್ಲಿ ಯುದ್ಧ ಕವಿದ ವಾತಾವರಣ ಇದೆ. ಈ ಸಂದರ್ಭದಲ್ಲಿ ದೇಶದ ಭದ್ರತೆ, ಸುರಕ್ಷತೆಗೆ ನೆರವಾಗುವ ಬೆಲ್ಜಿಯಂ ಮೆಲಿನೋಯ್ಸ್ ಶ್ವಾನ ತಳಿಯ ತಲಾ ಒಂದು ಲಕ್ಷ ರು. ಬೆಲೆ ಬಾಳುವ ಎರಡು ಮರಿಗಳನ್ನು ಅಂಕೋಲಾದ ರಾಘವೇಂದ್ರ ಭಟ್ ಸಿಆರ್‌ಪಿಎಫ್‌ಗೆ ಕೊಡುಗೆ ನೀಡಿದ್ದಾರೆ.

ಭಾನುವಾರ ಅಂಕೋಲಾದ ಬಾವಿಕೇರಿಯ ತಮ್ಮ ನಿವಾಸದಲ್ಲಿ ಸಿಆರ್‌ಪಿಎಫ್‌ನ ರಮೇಶ ಕೆ.ಆರ್. ಹಾಗೂ ಸಜ್ಜನ ಸಿಂಗ್ ಅವರಿಗೆ ರಾಘವೇಂದ್ರ ಭಟ್ ಹಾಗೂ ಅವರ ಪತ್ನಿ ರಾಜೇಶ್ವರಿ ಶ್ವಾನದ ಮರಿಗಳನ್ನು ಹಸ್ತಾಂತರಿಸಿದರು.

ಇವರ ನಾಯಿ ಮರಿಗಳಿಗೆ ಸಾಕಷ್ಟು ಬೇಡಿಕೆಯೂ ಇತ್ತು. ಆದರೆ ಭಾರತ- ಪಾಕ್ ನಡುವೆ ಸದ್ಯ ತ್ವೇಷಮಯ ಪರಿಸ್ಥಿತಿ ಇದೆ. ಯಾವುದೇ ಸಮಯದಲ್ಲೂ ಯುದ್ಧ ಆಗಬಹುದು. ದೇಶದ ಸುರಕ್ಷತೆ, ಭದ್ರತೆಗಾಗಿ ಕೊಡುಗೆ ನೀಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಈ ನಾಯಿ ಮರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಿ ದೇಶದ ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ.

ಎರಡು ವರ್ಷಗಳ ಹಿಂದೆ ಇಂಡಿಯನ್ ಆರ್ಮಿಯವರು ಇವರು ಸಾಕಿದ ಶ್ವಾನ ಮರಿಗಳ ದಕ್ಷತೆ, ಕಾರ್ಯನಿರ್ವಹಣೆಯನ್ನು ಗಮನಿಸಿ, ಇದೆ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಮರಿಗಳನ್ನು ಆಸ್ಸಾಂಗೆ ಕೊಂಡೊಯ್ದಿದ್ದರು. ಅಲ್ಲಿ ತರಬೇತಿ ನೀಡಿ ದೇಶ ಸೇವೆಗೆ ನಿಯೋಜಿಸಿದ್ದಾರೆ.

ಬೆಲ್ಜಿಯಂ ಮೆಲಿನೋಯ್ಸ್ ಶ್ವಾನಗಳು 10 ಅಡಿಯಷ್ಟು ದೂರ ಜಿಗಿಯಬಲ್ಲವು. ಚುರುಕಾಗಿ ಓಡಬಲ್ಲವು. ಸೂಕ್ತ ತರಬೇತಿ ನೀಡಿದಲ್ಲಿ ಬಾಂಬ್, ಡ್ರಗ್ಸ್ ಪತ್ತೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲು ಯೋಗ್ಯವಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿಯಾಗಿರುವ ರಾಘವೇಂದ್ರ ಭಟ್ 27 ವರ್ಷಗಳಿಂದ ನಾಯಿ ಸಾಕುತ್ತಿದ್ದಾರೆ. ಇವರ ಪತ್ನಿ ರಾಜೇಶ್ವರಿ, ಪುತ್ರಿ ಹಾಗೂ ತಾಯಿ ಕೂಡ ನೆರವಾಗುತ್ತಾರೆ.

ಇವರು ಸಾಕಿದ ಬೆಲ್ಜಿಯಂ ಮೆಲಿನೋಯ್ಸ್ ತಳಿಯ ಶ್ವಾನದ 17 ಮರಿಗಳನ್ನು ಈ ಹಿಂದೆ ಇಂಡಿಯನ್ ಆರ್ಮಿಯವರು ಖರೀದಿಸಿದ್ದಾರೆ. ಬೆಂಗಳೂರು ಪೊಲೀಸ್ ಇಲಾಖೆ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ, ಕಾರ್ಕಳ ಎಎನ್‌ಎಫ್‌ನಲ್ಲೂ ಇವರಿಂದ ಖರೀದಿಸಿದ ನಾಯಿಗಳು ಸೇವೆ ಸಲ್ಲಿಸುತ್ತಿವೆ.

ನಾನು ಸಾಕಿದ ಶ್ವಾನದ 17 ಮರಿಗಳನ್ನು ಇಂಡಿಯನ್ ಆರ್ಮಿಯವರು ದೇಶ ಸೇವೆಗೆ ಕೊಂಡೊಯ್ದಿದ್ದಾರೆ. ದೇಶದ ಭದ್ರತೆ, ಸುರಕ್ಷತೆಗೆ ಈ ಶ್ವಾನಗಳ ಅಗತ್ಯತೆ ಮನಗಂಡು ಎರಡು ಮರಿಗಳನ್ನು ಸಿಆರ್‌ಪಿಎಫ್‌ಗೆ ಕೊಡುಗೆಯಾಗಿ ನೀಡುತ್ತಿದ್ದೇನೆ ಎನ್ನುತ್ತಾರೆ ಅಂಕೋಲಾ ರಾಘವೇಂದ್ರ ಭಟ್.