ನಿಯಂತ್ರಣ ತಪ್ಪಿ ಕಾರು ಪಲ್ಟಿ ಶಿಕ್ಷಕರಿಬ್ಬರ ದುರ್ಮರಣ

| Published : May 13 2024, 12:01 AM IST

ಸಾರಾಂಶ

ಚಾಲಕ ಶಿಕ್ಷಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸಹ ಶಿಕ್ಷಕರಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ಮಧ್ಯ ರಾತ್ರಿ ಪಟ್ಟಣದ ಹೊರವಲಯ ಕಣಿವೇನಹಳ್ಳಿ ಗೇಟ್‌ ನಯಾರ ಪೆಟ್ರೋಲ್‌ ಬಂಕ್‌ ಸಮೀಪ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಚಾಲಕ ಶಿಕ್ಷಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸಹ ಶಿಕ್ಷಕರಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ಮಧ್ಯ ರಾತ್ರಿ ಪಟ್ಟಣದ ಹೊರವಲಯ ಕಣಿವೇನಹಳ್ಳಿ ಗೇಟ್‌ ನಯಾರ ಪೆಟ್ರೋಲ್‌ ಬಂಕ್‌ ಸಮೀಪ ಸಂಭವಿಸಿದೆ.

ಮುಖ್ಯಶಿಕ್ಷಕರಾದ ಒ.ಧನುಂಜಯ (55), ಶ್ರೀಕೃಷ್ಣ (46) ಮೃತ ದುರ್ದೈವಿಗಳು. ಶಿಕ್ಷಕರಾದ ಆರ್‌.ಎಂ.ನರಸಿಂಹ ಹಾಗೂ ಚಲಪತಿ ಗಂಭೀರ ಗಾಯಗೊಂಡವರು. ಪಾವಗಡದ ಶಿಕ್ಷಕರಾದ ಶೋಭಾ ಎನ್ನುವವರು ಪುತ್ರಿಯ ವಿವಾಹ ಕಾರ್ಯಕ್ರಮದ ನಿಮಿತ್ತ ಈ ನಾಲ್ಕು ಮಂದಿ ಶಿಕ್ಷಕರು ತುಮಕೂರಿಗೆ ತೆರಳಿದ್ದರು. ಆರತಕ್ಷತೆ ಕಾರ್ಯಕ್ರಮ ಮುಗಿಸಿ ರಾತ್ರಿ ಮರಳಿ ಪಾವಗಡಕ್ಕೆ ವಾಪಸ್ಸು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನೇನು ಪಾವಗಡಕ್ಕೆ ತಲುವಷ್ಟರಲ್ಲಿ ಇಲ್ಲಿನ ನಯಾರ ಪೆಟ್ರೋಲ್ ಬಂಕ್ ಸಮೀಪಕ್ಕೆ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಇದರಿಂದ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರಾಚಾರ್ಯ ಓ.ಧನುಂಜಯ ಮತ್ತು ಗೌಡಟ್ಟಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕೃಷ್ಣ ಈ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದೇ ವಾಹನದಲ್ಲಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ರಾಜವಂತಿ ಪ್ರೌಢಶಾಲೆಯ ಶಿಕ್ಷಕ ಆರ್‌.ಎಂ.ನರಸಿಂಹ ಮತ್ತು ವೆಂಕಟಾಚಲಪತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ತುರ್ತು ವಾಹನದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಬೆಂಗಳೂರಿಗೆ ಕರೆದ್ಯೊಯ್ದು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಮೃತ ಶವಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ವೈದ್ಯರಿಂದ ಶವ ಪರೀಕ್ಷೆ ನಡೆಸಿದ ಬಳಕ ಸಂಬಂಧಿಕರಿಗೆ ಒಪ್ಪಿಸಲಾಯಿತು.

ಮಾಹಿತಿ ಮೇರೆಗೆ ಸಿಬಿಐ ಸುರೇಶ್ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸರ್ಕಾರಿ ಆಸ್ಪತ್ರೆಯ ವಿಶ್ರಾಂತ ವೈದ್ಯ ಡಾ,ಕಿರಣ್‌, ತಾಲೂಕು ಆದಿಜಾಂಬ‍ವ ಸಂಘದ ಅಧ್ಯಕ್ಷ ಕನ್ನಮೇಡಿ ಎಸ್‌.ಹನುಮಂತರಾಯಪ್ಪ, ದಲಿತ ಜಾಗೃತಿ ಸಮಿತಿಯ ತಾ,ಅಧ್ಯಕ್ಷ ನಾರಾಯಣಪ್ಪ, ಎಚ್‌ಆರ್‌ಎಫ್‌ಡಿಎಲ್‌ ಜಿಲ್ಲಾ ಸಂಚಾಲಕ ಕಡಪಲಕರೆ ಹನುಮಂತರಾಯಪ್ಪ, ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ದೇವಲಕರೆ ಲೋಕೇಶ್‌, ವಳ್ಳೂರು ನಾಗೇಶ್, ನೀಲಾ ಆರ್ಟ್ಸ್‌ ನಾಗರಾಜ್‌, ಶಿಕ್ಷಕ ಲಕ್ಷ್ಮಣ್‌ಮೂರ್ತಿ, ಬಳಸಮುದ್ರ ವೆಂಕಟೇಶ್‌ ಹಾಗೂ ತಾ,ಸರ್ಕಾರಿ ನೌಕರರ ಸಂಘ, ತಾ,ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಪದಾಧಿಕಾರಿಗಳು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದರು.