ಚಿಕ್ಕಬಳ್ಳಾಪುರ: ಮದುವೆಗೆಂದು ತೆಗೆದುಕೊಂಡು ಹೋಗುತ್ತಿದ್ದ ₹6 ಲಕ್ಷ ಹಣವನ್ನು ಕಳ್ಳರ ಗುಂಪೊಂದು ಕಸಿದು ಪರಾರಿಯಾಗಿದ್ದು, ತಂಡದಲ್ಲಿದ್ದ ಇಬ್ಬರು ಕಳ್ಳರನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿರುವ ಘಟನೆ ನಗರ ಹೊರವಲಯದ ಕೆವಿ ಕ್ಯಾಂಪಸ್ ಸಮೀಪ ಹೂವಿನ ಮಾರುಕಟ್ಟೆ ಬಳಿ ಭಾನುವಾರ ನಡೆದಿದೆ.
ಆಂಧ್ರಪ್ರಧೇಶದ ತಿರುಪತಿ ಮೂಲದ ರಮೇಶ್- ಉಷಾ ಎಂಬ ದಂಪತಿ ಬೆಂಗಳೂರಿನಲ್ಲಿ ದೊಡ್ಡಮ್ಮನ ಮಗಳ ಮದುವೆಗೆ ಹಣ ಕೊಡಲು ₹6 ಲಕ್ಷ ಹಣ ಕಾರಿನಲ್ಲಿ ತರುತ್ತಿದ್ದರು. ತಿರುಪತಿಯಿಂದ ನೇರವಾಗಿ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆ ಸಮೀಪ ಬಂದು ಊಟಕ್ಕೆಂದು ಹೋಟೆಲ್ ಬಳಿ ಕಾರನ್ನು ನಿಲ್ಲಿಸಿದ್ದಾರೆ. ಊಟ ಮಾಡಿ ಹಣ ಇದ್ದ ಬ್ಯಾಗಿಂದ ₹500 ತೆಗೆದು ಕೊಟ್ಟಿದ್ದಾರೆ. ಇದನ್ನು ಗಮನಿಸಿಕೊಂಡಿದ್ದ ಕಳ್ಳರು ಬಂದು ತೆಲುಗಿನಲ್ಲಿ ಮಾತನಾಡಿಸಿ, ಇದ್ದಕ್ಕಿದ್ದಂತೆ ನಾಲ್ಕೈದು ಜನ ದಂಪತಿ ಮೇಲೆ ಹಾಡಹಗಲೇ ಅಟ್ಯಾಕ್ ಮಾಡಿ ಹಣ ಇದ್ದ ಬ್ಯಾಗನ್ನು ಕಿತ್ಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಕಾರಿನಲ್ಲಿದ್ದ ಆಂಧ್ರದ ಕುಟುಂಬ ಜೋರಾಗಿ ಕಿರುಚಾಡಿಕೊಂಡು ಕಳ್ಳರ ಹಿಂದೆ ಬಿದ್ದು ಅಟ್ಟಾಡಿಸಿದ್ದಾರೆ . ಅಷ್ಟೊತ್ತಿಗೆ ಹೂ ಮಾರುಕಟ್ಟೆಯ ಕಡೆ ಹಣ ಹಿಡಿದು ಓಡಿದ ಕಳ್ಳರು ದಿಕ್ಕಾಪಾಲಾಗಿ ಓಡಿದ್ದಾರೆ. ಕುಟುಂಬದವರು ಕೂಗಾಡುತ್ತಿದ್ದುದ್ದನ್ನು ಕಂಡ ಹೂ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ರೈತರು, ಅಲ್ಲಿಯೇ ಆಟವಾಡುತ್ತಿದ್ದ ಕೆ.ವಿ.ಕ್ಯಾಂಪಸ್ ನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇಬ್ಬರು ಕಳ್ಳರನ್ನು ಹಿಡಿದುಕೊಂಡಿದ್ದಾರೆ. ಇಬ್ಬರು ಕಳ್ಳರನ್ನು ಕರೆತಂದು ಅಲ್ಲಿಯೇ ಇದ್ದ ಕಂಬಕ್ಕೆ ಕಟ್ಟಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೊತ್ತಿಗಾಗಲೇ ಹಣದ ಬ್ಯಾಗಿನೊಂದಿಗೆ ಇನ್ನಿಬ್ಬರು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.ವಿಚಾರ ತಿಳಿದ ನಂದಿ ಗಿರಿಧಾಮ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ಕಟ್ಟಾಕ್ಕಿದ್ದ ಕಳ್ಳರನ್ನು ಬಿಡಿಸಿ ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡು ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.