ಸಾರಾಂಶ
ಪಟ್ಟಣದಲ್ಲಿ ಜಮೀನೊಂದನ್ನು ಪೌತಿ ಖಾತೆ ಮಾಡಿಕೊಡುವ ಸಂಬಂಧವಾಗಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ₹2,25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ, ಶುಕ್ರವಾರ ಲೋಕಾಯುಕ್ತ ಪೊಲೀಸರು, ನಾಡಕಚೇರಿಯ ಸಮೀಪದಲ್ಲಿ ದಾಳಿ ನಡೆಸಿದಾಗ ಗ್ರಾಮ ಆಡಳಿತಾಧಿಕಾರಿ ಸುನೀಲ್ ಮತ್ತು ಮಡಿವಾಳಪ್ಪ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಪಟ್ಟಣದಲ್ಲಿ ಜಮೀನೊಂದನ್ನು ಪೌತಿ ಖಾತೆ ಮಾಡಿಕೊಡುವ ಸಂಬಂಧವಾಗಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ₹2,25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಕೆಯಾಗಿದ್ದ ದೂರನ್ನು ಆಧರಿಸಿ, ಶುಕ್ರವಾರ ಲೋಕಾಯುಕ್ತ ಪೊಲೀಸರು, ನಾಡಕಚೇರಿಯ ಸಮೀಪದಲ್ಲಿ ದಾಳಿ ನಡೆಸಿದಾಗ ಗ್ರಾಮ ಆಡಳಿತಾಧಿಕಾರಿ ಸುನೀಲ್ ಮತ್ತು ಮಡಿವಾಳಪ್ಪ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ಪಟ್ಟಣದ ಸರ್ವೇ ನಂಬರ್ 33, ಹಾಗೂ 39ನೇ ಸರ್ವೇ ನಂಬರ್ ಗಳ ಜಮೀನುಗಳ ಪೌತಿ ಖಾತೆ ಮಾಡಿಕೊಡಲು ಹಣ ಕೇಳಿದ್ದರು ಎಂದು ಗೌತಮ್ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ಗ್ರಾಮ ಆಡಳಿತಾಧಿಕಾರಿಗಳಾದ ಮಡಿವಾಳಪ್ಪ, ಸುನೀಲ್ ವಿರುದ್ಧ ದೂರು ನೀಡಿದ್ದರು.
ಏನಿದು ಘಟನೆ: ಪಟ್ಟಣದ ಸರ್ವೇ ನಂಬರ್ 33 ಹಾಗೂ 39 ರಲ್ಲಿನ ಜಮೀನುಗಳು ಪುಟ್ಟಣ್ಣ ಆಲಿಯಾಸ್ ಬಸಪ್ಪ ಎಂಬುವವರ ಹೆಸರಿನಲ್ಲಿದ್ದು, ಅವರು ಹಾಗೂ ಅವರ ಪತ್ನಿ ಮತ್ತು ಅವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪುಟ್ಟಣ್ಣನವರ ಹೆಸರಿನಲ್ಲಿನಲ್ಲಿರುವ ಜಮೀನನ್ನು ಅವರ ಇಬ್ಬರು ಸೊಸೆಯರ ಹೆಸರಿಗೆ ಖಾತೆ ಮಾಡಿಕೊಡುವುದಕ್ಕಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.ನಾಡಕಚೇರಿಯ ಬಳಿಯಲ್ಲಿ ದಾಳಿ ನಡೆಸಿದಾಗ ಗ್ರಾಮ ಆಡಳಿತಾಧಿಕಾರಿ ಸುನೀಲ್ ಅವರ ಕಾರಿನಲ್ಲಿ ನಗದು ಹಣ ಪತ್ತೆಯಾಗಿದ್ದು, 6 ಗಂಟೆಗಳಿಗೂ ಹೆಚ್ಚು ಕಾಲ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪವನ್ ನೆಜ್ಜೂರ್, ಡಿ.ವೈ.ಎಸ್.ಪಿ ಗಿರೀಶ್, ಸರ್ಕಲ್ ಇನ್ಸ್‌ಪೆಕ್ಟರ್‌ರಾದ ಜೆ.ರಮೇಶ್, ಚಂದ್ರಕಾಂತ್, ನಂದಕುಮಾರ್ ಹಾಜರಿದ್ದರು.