ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಬಾರಿಯ ಸಚಿವ ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡುವ ಇರಾದೆ ಕಾಂಗ್ರೆಸ್ ಹೈಕಮಾಂಡ್ ಹೊಂದಿದ್ದು, ಈ ಸ್ಥಾನಕ್ಕಾಗಿ ಮಹಿಳಾ ಶಾಸಕಿಯರ ನಡುವೆ ತೀವ್ರ ಪೈಪೋಟಿ ನಿರ್ಮಾಣವಾಗಿದೆ.ಹಲವು ಶಾಸಕಿಯರು ಲಾಬಿ ನಡೆಸಿದ್ದರೂ ಪ್ರಧಾನವಾಗಿ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ, ಆರತಿ ಕೃಷ್ಣ, ರೂಪಕಲಾ ಶಶಿಧರ್ ಅವರ ಹೆಸರು ಕೇಳಿಬಂದಿದೆ.
ಈ ಪೈಕಿ ಅನ್ನಪೂರ್ಣ ಹಾಗೂ ಆರತಿ ಕೃಷ್ಣ ಅವರ ಲಾಬಿ ಪ್ರಭಾವಶಾಲಿ ಮಟ್ಟದಲ್ಲಿದೆ. ಇನ್ನು ಕೆ.ಎಚ್. ಮುನಿಯಪ್ಪ ಅವರ ಬದಲಿಗೆ ಪುತ್ರಿ ರೂಪಕಲಾ ಶಶಿಧರ್ ಅವರಿಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.ಆದರೆ, ಪ್ರಸ್ತುತ ದೊಡ್ಡಮಟ್ಟದಲ್ಲಿ ಚರ್ಚೆಯಲ್ಲಿ ಇಲ್ಲದಿದ್ದರೂ ಕೊನೆಯ ಕ್ಷಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಪಟ್ಟಿಯಲ್ಲಿ ಜಾಗ ಪಡೆಯುವ ಸಾಧ್ಯತೆಯಿದೆ ಇದೆ ಎಂದು ಮೂಲಗಳು ಹೇಳಿವೆ.ಕೈ ‘ಭವಿಷ್ಯದ ನಾಯಕ’ರಿಂದ ಸಚಿವ ಸ್ಥಾನಕ್ಕೆ ತೀವ್ರ ಲಾಬಿ:ರಾಜ್ಯ ಕಾಂಗ್ರೆಸ್‌ನಲ್ಲಿ ಭವಿಷ್ಯದ ನಾಯಕರು ಎಂದೇ ಬಿಂಬಿಸಿಕೊಳ್ಳುತ್ತಿರುವ ತಂಡವೊಂದು ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಸದ್ದು ಗದ್ದಲವಿಲ್ಲದೆ ಮುಂದಾಗಿರುವ ಬೆಳವಣಿಗೆ ನಡೆದಿದೆ.
ಕಾಂಗ್ರೆಸ್‌ನ ‘ಫ್ಯೂಚರ್ ಲೀಡರ್ಸ್’ ಎಂದು ಗುರುತಿಸಿಕೊಂಡಿರುವ ಈ ಪಡೆ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ತಮ್ಮದೇ ಪಡೆಯ ಹಲವು ಶಾಸಕರನ್ನು ಸಂಪುಟಕ್ಕೆ ಸೇರಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದ ಈ ತಂಡದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಅಜಯಸಿಂಗ್, ಶ್ರೀನಿವಾಸ್ ಮಾನೆ, ಯಾಸೀನ್ ಪಠಾಣ್ ನಾಯಕರಾದ ರವಿ ಬೋಸರಾಜ್ ಸೇರಿ ಹಲವು ನಾಯಕರಿದ್ದಾರೆ.ಈ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಮರಾಠ ಕೋಟಾದಲ್ಲಿ ಶ್ರೀನಿವಾಸ ಮಾನೆ, ಮುಸ್ಲಿಂ ಕೋಟಾದಲ್ಲಿ ರಿಜ್ವಾನ್ ಅರ್ಷದ್ ಹಾಗೂ ಹಿಂದುಳಿದ ಕೋಟಾದಲ್ಲಿ ಅಜಯಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸುವಂತೆ ತೀವ್ರ ಲಾಬಿ ನಡೆಸಿದ್ದು, ಇದರಲ್ಲಿ ಭಾಗಶಃ ಯಶಸ್ಸನ್ನು ಕಂಡಿದೆ ಎನ್ನಲಾಗಿದೆ.ಮೊದಲ ಬಾರಿಯ ಶಾಸಕರಾದ ಪೊನ್ನಣ್ಣ, ಶರತ್‌ಗೆ ಸಿಗುತ್ತಾ ಛಾನ್ಸ್?:ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಪ್ರಥಮ ಬಾರಿಗೆ ಶಾಸಕರಾದ ಹಲವರು ತೀವ್ರ ಲಾಬಿ ನಡೆಸಿದ್ದು, ಯಾರಿಗೆ ಯಶಸ್ಸು ಸಿಗುವುದು ಎಂಬುದನ್ನು ಕಾದು ನೋಡಬೇಕಿದೆ.ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 38 ಮಂದಿ ಶಾಸಕರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, 2023ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಒಬ್ಬರಿಗೂ ಅವಕಾಶ ದೊರೆತಿರಲಿಲ್ಲ.ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದು ಮೊದಲ ಬಾರಿಗೆ ಶಾಸಕರಾದವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಪೈಕಿ ಪ್ರಥಮ ಬಾರಿಗೆ ಶಾಸಕರಾದ ಎ.ಎಸ್.ಪೊನ್ನಣ್ಣ, ಶರತ್ ಬಚ್ಚೇಗೌಡ ಅವರ ಹೆಸರು ರಾಜ್ಯ ನಾಯಕರು ಹೈಕಮಾಂಡ್ ಗೆ ಶಿಫಾರಸು ಮಾಡಿರುವ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.