ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.ಒಡಿಶಾದ ಸೋನಾರಾಮ್ (26) ಹಾಗೂ ಪರಿಮಳ್ (31) ಮೃತ ದುರ್ದೈವಿಗಳು. ಈ ಘಟನೆಯಲ್ಲಿ ಗಾಯಗೊಂಡಿರುವ ಜಾರ್ಖಂಡ್‌ನ ಸದಾನಂದ್. ಸುನೀಲ್ ಹಾಗೂ ಪಶ್ಚಿಮ ಬಂಗಾಳದ ಇಮ್ತಿಯಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲಾ ಕಾರ್ಮಿಕರು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. ನಂದಿನಿ ಲೇಔಟ್ ಹತ್ತಿರದ ಎಫ್‌ಟಿಐ ಸರ್ಕಲ್ ಬಳಿ ಬಿಡಿಎ ನಿರ್ಮಿಸುತ್ತಿರುವ ಅಂಡರ್ ಪಾಸ್ ಕಾಮಗಾರಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
20 ಅಡಿ ಗುಂಡಿಯಲ್ಲಿ ಕೆಲಸಹಲವು ದಿನಗಳ ಹಿಂದೆ ಕೆಲಸ ಅರಸಿಕೊಂಡು ತಮ್ಮೂರಿನಿಂದ ನಗರಕ್ಕೆ ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ಕಾರ್ಮಿಕರು ಬಂದಿದ್ದರು. ಬಳಿಕ ನಂದಿನಿ ಲೇಔಟ್ ಸಮೀಪ ನೆಲೆಸಿದ್ದ ಅವರು, ಕೆಲ ದಿನಗಳಿಂದ ಬಿಡಿಎ ವತಿಯಿಂದ ಎಫ್‌ಐಟಿ ಸರ್ಕಲ್ ಬಳಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿಯಲ್ಲಿ ದುಡಿಯುತ್ತಿದ್ದರು.
ಎಂದಿನಂತೆ ಮಂಗಳವಾರ ಬೆಳಗ್ಗೆ ಸಹ ಐವರು ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಆದರೆ ಎರಡು ದಿನಗಳಿಂದ ಸುರಿದ ಮಳೆಯಿಂದ ಅಂಡರ್ ಪಾಸ್‌ಗೆ ತೆಗೆಯಲಾಗಿದ್ದ ಸುಮಾರು 20 ಅಡಿ ಗುಂಡಿಯಲ್ಲಿ ನೀರು ತುಂಬಿತ್ತು. ಗುಂಡಿಯಲ್ಲಿದ್ದ ನೀರನ್ನು ಹೊರಗೆ ತೆಗೆದು ಅವರು ಕೆಲಸ ಮಾಡುತ್ತಿದ್ದರು. ಆಗ ಏಕಾಏಕಿ ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ. ತಕ್ಷಣವೇ ಗುಂಡಿಯಿಂದ ಸದಾನಂದ್, ಸುನೀಲ್, ಇಮ್ತಿಯಾಜ್ ಹೊರಗೆ ಓಡಿ ಬಂದಿದ್ದಾರೆ. ಆದರೆ ಪರಾರಿಯಾಗುವ ವೇಳೆಗೆ ಪರಿಮಳ್ ಹಾಗೂ ಸೋನಾಮ್ ಮೇಲೆ ಮಣ್ಣು ಕುಸಿದಿದೆ.
ಕೂಡಲೇ ಮಣ್ಣಿನಡಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಸ್ಥಳೀಯರು ಹಾಗೂ ಪೊಲೀಸರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಪರಿಮಳ್ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆ ಕರೆದೊಯ್ದರು ಕೂಡ ಚಿಕಿತ್ಸೆ ಫಲಿಸದೆ ಸೋನಾರಾಮ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದ ಮಣ್ಣು ಕುಸಿತ
ಎರಡು ದಿನಗಳಿಂದ ಸುರಿದ ಮಳೆ ಕಾರಣಕ್ಕೆ ಮಣ್ಣು ತೇವಗೊಂಡಿತ್ತು. ಗುಂಡಿಯಲ್ಲಿದ್ದ ನೀರನ್ನು ಕಾರ್ಮಿಕರು ಹೊರ ತೆಗೆದಿದ್ದಾರೆ. ಆಗ ತೇವಗೊಂಡಿದ್ದ ಮಣ್ಣು ಸಡಿಲವಾಗಿ ಕುಸಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮೃತರಿಗೆ ಬಿಡಿಎಯಿಂದ ತಲಾ ₹8 ಲಕ್ಷ ಪರಿಹಾರ
ಕಾಮಗಾರಿ ವೇಳೆ ನಡೆದ ದುರಂತದಲ್ಲಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ಬಿಡಿಎ ತಲಾ 8 ಲಕ್ಷ ರು.ಪರಿಹಾರ ಘೋಷಿಸಲಾಗಿದೆ. ಗಾಯಗೊಂಡ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಬಿಡಿಎ ಭರಿಸಲಿದೆ. ಗಾಯಗೊಂಡ ಕಾರ್ಮಿಕರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ದೊರೆಯುವಂತೆ ಬಿಡಿಎ ಎಲ್ಲ ರೀತಿಯ ಕ್ರಮ ವಹಿಸುತ್ತಿದೆ. ಜೊತೆಗೆ ಗಾಯಾಳುಗಳು ಹಾಗೂ ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ತಿಳಿಸಿದ್ದಾರೆ.ಮೂವರ ಮೇಲೆ ಎಫ್‌ಐಆರ್ ದಾಖಲು:
ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿ ಸೇರಿ ಮೂವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪಿಜೆಬಿ ಇಂಜಿನಿಯರಿಂಗ್ ಪ್ರೈ.ಲಿ, ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ಸೂಪರವೈಸರ್ ಬಿಜೋ ಜೋಸೆಫ್, ಸೈಟ್ ಇಂಜಿನಿಯರ್ ಬಿ.ಕಿಶೋರೆ ಸೇರಿ ಇತರರ ಮೇಲೆ ಮೃತ ಕಾರ್ಮಿಕರ ಕುಟುಂಬಸ್ಥರು ಕೇಸ್ ದಾಖಲಿಸಿದ್ದಾರೆ.