ಚಾವಡಿ ಗೆಳೆಯರ ಬಳಗದಿಂದ ನಾಳೆ ಎರಡು ಕೃತಿಗಳ ಲೋಕಾರ್ಪಣೆ

| Published : May 17 2025, 01:52 AM IST

ಸಾರಾಂಶ

1998 ರಿಂದ 2000 ಇಸವಿಯಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂಎ ಪದವಿ ಪೂರೈಸಿದ ಗೆಳೆಯ, ಗೆಳತಿಯರು ಒಂದೆಡೆ ಸೇರಿ ಸಾಹಿತ್ಯ ಕೃಷಿಗಾಗಿ ಹುಟ್ಟುಹಾಕಿದ ಈ ಸಂಸ್ಥೆಯೇ ಚಾವಡಿ ಗೆಳೆಯರ ಬಳಗ. ಈಗ ಆಯೋಜಿಸುತ್ತಿರುವುದು ಬಳಗದ ಚೊಚ್ಚಲ ಕಾರ್ಯಕ್ರಮ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಚಾವಡಿ ಗೆಳೆಯರ ಬಳಗವು ಮೇ 18ರಂದು ಬೆಳಗ್ಗೆ 10.30ಕ್ಕೆ ರಂಗಾಯಣದ ಬಿ.ವಿ. ಕಾರಂತ ರಂಗ ಚಾವಡಿ ವೇದಿಕೆಯಲ್ಲಿ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬಳಗದ ಕೃಷ್ಣ ಜನಮನ ಹೇಳಿದರು.

ಗೆಳೆಯರೇ ಸೇರಿ ಬರೆದಿರುವ ವಿವಿಧ ಪರಿಸರದ ಹಿನ್ನೆಲೆ, ಸಂಸ್ಕೃತಿಯ ಕಥಾ ಹಂದರವನ್ನು ಒಳಗೊಂಡ 12 ಕಥೆಗಳು ಮೊಳಕೆ ಎಂಬ ಕಥಾ ಸಂಕಲನದಲ್ಲಿದ್ದರೆ, ಗರಿಕೆ ಎಂಬ ಲೇಖನ ಸಂಕಲನದಲ್ಲಿ ಗೆಳೆಯರೇ ಬರೆದ ಅಂಕಣ ಬರಹಗಳ ಸಂಗ್ರಹವಿದೆ. ವಿಚಾರ ಪೂರ್ಣ ಲೇಖನಗಳು, ಪ್ರಗತಿಪರ ಚಿಂತನೆಯುಳ್ಳ ಲೇಖನ, ವಿಮರ್ಶೆ, ಸಂಶೋಧನಾ ಲೇಖನಗಳು ಇದರಲ್ಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಗುರುಗಳಾಗಿದ್ದ ಪ್ರೊ. ಕಾಳೇಗೌಡ ನಾಗವಾರ, ಪ್ರೊ.ಮಹಾದೇವ, ಪ್ರೊ. ಪಂಡಿತಾರಾಧ್ಯ, ಪ್ರೊ.ಎಂ.ಎನ್‌. ತಳವಾರ, ಪ್ರೊ.ಡಿ.ಕೆ. ರಾಜೇಂದ್ರ, ಪ್ರೊ. ರಾಗೌ ಅವರು ಕೃತಿಗಳನ್ನು ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸುವರು. ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯಂ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ಯಾವುದು ಈ ಚಾವಡಿ ಗೆಳೆಯರ ಬಳಗ:

1998 ರಿಂದ 2000 ಇಸವಿಯಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂಎ ಪದವಿ ಪೂರೈಸಿದ ಗೆಳೆಯ, ಗೆಳತಿಯರು ಒಂದೆಡೆ ಸೇರಿ ಸಾಹಿತ್ಯ ಕೃಷಿಗಾಗಿ ಹುಟ್ಟುಹಾಕಿದ ಈ ಸಂಸ್ಥೆಯೇ ಚಾವಡಿ ಗೆಳೆಯರ ಬಳಗ. ಈಗ ಆಯೋಜಿಸುತ್ತಿರುವುದು ಬಳಗದ ಚೊಚ್ಚಲ ಕಾರ್ಯಕ್ರಮ.

ಸುದ್ದಿಗೋಷ್ಠಿಯಲ್ಲಿ ಬಳಗದ ಮಹೇಶ್‌ ಅಗಸರಹಳ್ಳಿ, ಮದ್ದೂರು ದೊರೆಸ್ವಾಮಿ ಇದ್ದರು.

ಉಮಾ ಯಾನ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ, ಎನ್.ವ್ಹಿ. ರಮೇಶ್‌ ಕಲಾ ಬಳಗ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮೇ 26ರ ಬೆಳಗ್ಗೆ 10.30ಕ್ಕೆ ಉಮಾ ಯಾನ ಎಂಬ ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ.

ಇದೇ ವೇಳೆ ಹವ್ಯಾಸಿ ಲೇಖಕಿ ಹಾಗೂ ಅಭಿರುಚಿ ಬಳಗದ ಕಾರ್ಯದರ್ಶಿ ದಿ.ಉಮಾ ರಮೇಶ್‌ ಅವರ ಸ್ಮರಣೆಯಲ್ಲಿ ಕವನ, ಚುಟುಕು, ಮುಕ್ತಕ, ಲೇಖನ ಇತ್ಯಾದಿ ಪ್ರಕಾರಗಳಲ್ಲಿ ಬರೆದ ಲೇಖಕರ ರಚನೆಯನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಲು ರಾಜ್ಯಮಟ್ಟದ ಕವಿಗಳು ಹಾಗೂ ಸಾಹಿತಿಗಳನ್ನು ಆಹ್ವಾನಿಸಲಾಗುವುದು ಎಂದು ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನದ ಅಧ್ಯಕ್ಷ ಎನ್‌.ವ್ಹಿ.ರಮೇಶ್‌ ಹೇಳಿದ್ದಾರೆ.

ಮೇ 25ರ ಬೆಳಗ್ಗೆ 10.30 ರಿಂದ ನಡೆಯುವ ಈ ಕಾರ್ಯಕ್ರಮವನ್ನು ವಿಜಯನಗರ 1ನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದೆ. ಕಾರ್ಯಕ್ರಮದ ನಂತರ ಭಾಗವಹಿಸಿದವರ ಅಕ್ಷರ ನಮನವನ್ನು ಆಸಕ್ತಿ ಪ್ರಕಾಶನದಿಂದ ಪುಸ್ತಕ ರೂಪದಲ್ಲಿ ಹೊರತರಲು ಯೋಜಿಸಿದೆ. ಆಸಕ್ತರು ಮೇ 20ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮೊ. 98455 65238 ಕಳುಹಿಸಲು ಕೋರಲಾಗಿದೆ.