ಜಗಳೂರಲ್ಲಿ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

| Published : Apr 11 2025, 12:34 AM IST

ಜಗಳೂರಲ್ಲಿ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಐವರಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಭರಮಸಮುದ್ರದಲ್ಲಿ ಘಟನೆ । ಬಿಸಿಲ ತಾಪ ತಣಿಸಲು ನೀರಿಗಿಳಿದಿದ್ದ ಐವರಲ್ಲಿ ಇಬ್ಬರು ನೀರುಪಾಲು

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಐವರಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಬೇಸಿಗೆ ರಜೆ ಹಿನ್ನೆಲೆ ಬಿಸಿಲು ಹೆಚ್ಚಾಗಿರುವ ಕಾರಣ ತಾಪ ತಣಿಸಲು ಈಜಲು ಹೋಗಿದ್ದ ಭರಮಸಮುದ್ರ ಗ್ರಾಮದ ಬಸವರಾಜ್, ರೇಣುಕಮ್ಮ ಪುತ್ರ ಅಜ್ಜಯ್ (೧೮), ತಿಪ್ಪೇಸ್ವಾಮಿ, ಮಂಜುಳಾ ದಂಪತಿ ಪುತ್ರ ಓಬಳೇಶ್ (೨೦) ನೀರುಪಾಲಾಗಿದ್ದಾರೆ.

ಕಳೆದ ವರ್ಷ ಸುರಿದ ಭಾರಿ ಮಳೆ ಮತ್ತು ೫೭ ಕೆರೆ ತುಂಬಿಸುವ ಯೋಜನೆಯಿಂದ ಭರ್ತಿಯಾಗಿದ್ದ ದೊಡ್ಡ ಕೆರೆಯಲ್ಲಿ ಸಾಕಷ್ಟು ನೀರು ತುಂಬಿತ್ತು. ಇತ್ತೀಚೆಗೆ ಅಜ್ಜಯ್ಯ ಪಿಯುಸಿ ಪರೀಕ್ಷೆ ಮುಗಿಸಿದ್ದ. ಓಬಳೇಶ್ ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಗ್ರಾಮದ ಇತರ ಮೂವರು ಸ್ನೇಹಿರೊಂದಿಗೆ ಸೇರಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದಾರೆ. ಮೃತ ಓಬಳೇಶ್‌ಗೆ ಈಜು ಬರುತ್ತಿರಲಿಲ್ಲ. ಆಳವಾದ ಗುಂಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದ ಕಾರಣ ಆತ ಮುಳುಗಿದ್ದಾನೆ. ಓಬಳೇಶ್‌ನನ್ನು ರಕ್ಷಿಸಲು ಹೋದ ಅಜ್ಜಯ್ಯ ಸಹ ನೀರಿನಲ್ಲಿ ಮುಳುಗಿದ್ದಾನೆ. ಉಳಿದ ಮೂರು ಜನ ಯುವಕರು ನೀರಿನಿಂದ ಹೊರ ಬಂದು ಕೂಗಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಇಬ್ಬರೂ ಮುಳುಗಿದ್ದರು. ತಕ್ಷಣ ಸ್ಥಳೀಯರು ರಕ್ಷಣೆಗೆ ಬಂದರೂ ಯುವಕರು ಕಾಣದ ಹಿನ್ನೆಲೆ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದರು.

ಅಗ್ನಿ ಶಾಮಕ ಸಿಬ್ಬಂದಿ ನೀರಿಗಿಳಿದು ಶೋಧಿಸಿದಾಗ ಇಬ್ಬರು ಯುವಕರ ಮೃತ ದೇಹಗಳು ಪತ್ತೆಯಾಗಿವೆ. ನೀರು ಕುಡಿದಿದ್ದರೂ ಬದುಕಿರಬಹುದು ಎಂಬ ಕಾರಣದಿಂದ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟುತ್ತು. ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಸವರಾಜ್ ಪ್ರಕರಣ ದಾಖಲಿಸಿದ್ದಾರೆ. ಮೃತದೇಹಗಳನ್ನು ಜಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಸಂಬಂಧಿಕರು ತಿಳಿಸಿದರು.

ಸ್ಥಳಕ್ಕೆ ಪಿಎಸ್ಐ ಗಾದಿಲಿಂಗಪ್ಪ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ಜಾಗೃತಿ ಫಲಕ ಇದ್ದರೂ ನಿರ್ಲಕ್ಷ್ಯ

ಈ ಹಿಂದೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮಗುವೊಂದು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದಾಗ ಶಾಸಕ ಬಿ.ದೇವೇಂದ್ರಪ್ಪ, ತಾಪಂ ಇಒ ಕೆಂಚಪ್ಪ ಭೇಟಿ ನೀಡಿ ತುಂಬಿರುವ ಕೆರೆಗಳಲ್ಲಿ ಯಾರೂ ಈಜಲು ಹೋಗದಂತೆ ನಿರ್ಬಂಧ ಹೇರಿ ಜಾಗೃತಿಯ ನಾಮಫಲಕಗಳ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಆದರೂ ಸಹ ರಜೆ ಹಿನ್ನೆಲೆ ಯುವಕರು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಶಾಸಕ ಬಿ.ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಕ್ಕೆ, ಶಾಸಕ ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಮಾಜಿ ಜಿ.ಪಂ.ಸದಸ್ಯ ಕೆ.ಪಿ. ಪಾಲಯ್ಯ ಸಾಂತ್ವನ ಹೇಳಿದ್ದಾರೆ.