ಹಾವೇರಿ ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ 165ನೇ ಜಯಂತ್ಯುತ್ಸವ ಆಚರಿಸಲಾಯಿತು.

ಹಾವೇರಿ: ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯಿಂದ ಸಮಾಜ ಸೇವೆ ಮಾಡಿ, ತಮ್ಮ ಸರ್ವಸ್ವವನ್ನೂ ಸಮಾಜಕ್ಕೆ ಧಾರೆ ಎರೆದ ಧೀಮಂತ ತ್ಯಾಗವೀರ ಶಿರಸಂಗಿ ಲಿಂಗರಾಜರು ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸವದತ್ತಿ ಕೆಎಲ್‌ಇ ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಕೆ. ರಾಮರೆಡ್ಡಿ ಹೇಳಿದರು.ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಪದವಿ ಪೂರ್ವ ಮಹಾವಿದ್ಯಾಲಯ, ಬಿಸಿಎ ಮಹಾವಿದ್ಯಾಲಯ ಹಾಗೂ ವಾಣಿಜ್ಯ ಸ್ನಾತಕೋತ್ತರ ಕೇಂದ್ರ ಇವರುಗಳ ಆಶ್ರಯದಲ್ಲಿ ಜರುಗಿದ ತ್ಯಾಗವೀರ ಶಿರಸಂಗಿ ಲಿಂಗರಾಜರ 165ನೇ ಜಯಂತ್ಯುತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ನಾಡಿನ ಅಕ್ಷರ ದಾಸೋಹಕ್ಕೆ ಸಮಸ್ತ ಆಸ್ತಿಯನ್ನು ಮೀಸಲಿಟ್ಟು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವಲ್ಲಿ ಸಹಕಾರಿಗಳಾದ ಶಿರಸಂಗಿ ಲಿಂಗರಾಜರು ಕೃಷಿ, ವಿಜ್ಞಾನ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಉದಾರವಾಗಿ ದಾನ ನೀಡಿ ಸಮೃದ್ಧಿಗೊಳಿಸಿದ ಅಪರೂಪದ ವ್ಯಕ್ತಿತ್ವದವರು. ಸಮಾಜದ ಸ್ಥಿತಿಗತಿಗಳನ್ನು ಕಂಡುಂಡ ಲಿಂಗರಾಜರು ತಮ್ಮ ಅವಧಿಯಲ್ಲಿ ಅಷ್ಟೇ ಅಲ್ಲದೇ ತಮ್ಮ ನಂತರದ ದಿನಗಳಲ್ಲೂ ಸಮಾಜಮುಖಿ ಕಾರ್ಯಗಳು ನಡೆಯಬೇಕೆಂದು ಬಯಸಿ ಟ್ರಸ್ಟ್ ಸ್ಥಾಪಿಸಿ ಜೀವಂತ ಪ್ರಜ್ಞೆಯ ಕಾರ್ಯಗಳನ್ನು ಇಂದಿಗೂ ನಿಸ್ವಾರ್ಥಯುತವಾಗಿ ಮುನ್ನಡೆಸಿಕೊಂಡು ಬಂದಿರುವುದು ಅವರ ದೂರದೃಷ್ಟಿಯ ಹಿತಚಿಂತನೆಯನ್ನು ತಿಳಿಸುತ್ತದೆ. ಇಂದಿನ ಯುವ ಜನತೆಯು ಅವರ ಬಾಳ ಸತ್ಪಥವನ್ನು ಆದರ್ಶವಾಗಿಟ್ಟುಕೊಂಡು ಭವಿಷ್ಯತ್ತಿನಲ್ಲಿ ಸಮಾಜ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪದವಿ ಪ್ರಾಚಾರ್ಯ ಪ್ರೊ. ಎಂ. ಎಂ. ಹೊಳ್ಳಿಯವರ ಮಾತನಾಡಿ, ತ್ಯಾಗವೀರ ಶಿರಸಂಗಿ ಲಿಂಗರಾಜರು ಬಡತನದಲ್ಲಿ ಹುಟ್ಟಿ ಬೆಳೆದರೂ ಸಹ ಭಾವನೆಯಲ್ಲಿ ಶ್ರೀಮಂತಿಕೆಯುಳ್ಳವರಾಗಿದ್ದರು. ಅವರ ವಿಚಾರ ಮತ್ತು ಚಿಂತನೆಗಳು ಪರೋಪಕಾರಕ್ಕಾಗಿಯೇ ಮೀಸಲಿದ್ದವು. ಕಾನೂನು ಬಲ್ಲವರಾಗಿದ್ದ ಅವರು ಸಮಾಜದ ಹಲವು ರೀತಿಯ ತೊಡಕುಗಳನ್ನು ನಿವಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಕೆ.ಎಲ್.ಇ. ಸಂಸ್ಥೆಯನ್ನು ಸ್ಥಾಪಿಸುವ ಸಂದರ್ಭದಲ್ಲಿ ಸಪ್ತರ್ಷಿಗಳೊಟ್ಟಿಗೆ ಶಿರಸಂಗಿ ಲಿಂಗರಾಜರ ಟ್ರಸ್ಟ್ ಸ್ಪಂದಿಸಿ ಮಹತ್ತರ ದೇಣಿಗೆ ನೀಡಿದ್ದನ್ನು ಯಾರೂ ಮರೆಯುವಂತಿಲ್ಲ. ದಿಟ್ಟ ನಿಲುವಿನ ಧೀರೋದಾತ್ತರಾದ ಲಿಂಗರಾಜರು ಈ ಸಮಾಜಕ್ಕೆ ಮಾಡಿದ ಮಹದುಪಕಾರದ ಸರಣಿ ಸೀಮಾತೀತವಾದುದು ಎಂದು ಬಣ್ಣಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ನಯನಾ ಎಂ ಪ್ರಾರ್ಥಿಸಿದರು. ಪದವಿಪೂರ್ವ ಪ್ರಾಚಾರ್ಯ ಡಾ. ಜೆ. ಆರ್. ಶಿಂಧೆ ಸ್ವಾಗತಿಸಿದರು. ಪ್ರೊ. ಶ್ರೀದೇವಿ ದೊಡ್ಡಮನಿ ಪರಿಚಯಿಸಿದರು. ಪ್ರೊ. ಸಿದ್ಧೇಶ್ವರ ಹುಣಸಿಕಟ್ಟಿಮಠ ನಿರ್ವಹಿಸಿದರು. ಬಿಸಿಎ ಪ್ರಾಚಾರ್ಯ ಪ್ರೊ. ವೆಂಕಟೇಶ ಕಲಾಲ ವಂದಿಸಿದರು.ಕಾರ್ಯಕ್ರಮದನ್ವಯ ತ್ಯಾಗವೀರ ಶಿರಸಂಗಿ ಲಿಂಗರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಐಕ್ಯುಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ, ಎಂಕಾಂ ಸಂಯೋಜಕ ಡಾ. ಜಿ.ಎಸ್. ಬಾರ್ಕಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.