ತ್ಯಾವರೆಕೊಪ್ಪ ಸಫಾರಿಯ ಲಯನ್‌ ಸರ್ವೇಶ ಇನ್ನಿಲ್ಲ

| Published : Feb 02 2024, 01:07 AM IST

ಸಾರಾಂಶ

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 13 ವರ್ಷದ ಸಿಂಹ ಸರ್ವೇಶ ಗುರುವಾರ ಬೆಳಗ್ಗೆ ಸಾವು ಕಂಡಿದೆ. ಬನ್ನೇರುಘಟ್ಟದಿಂದ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಸಿಂಹ ಸರ್ವೇಶ ಕಳೆದ 4 ವರ್ಷಗಳಿಂದ ಲಯನ್ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಕಾಣಿಸಿಕೊಂಡಿತ್ತು.

ಶಿವಮೊಗ್ಗ: ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 13 ವರ್ಷದ ಸಿಂಹ ಸರ್ವೇಶ ಗುರುವಾರ ಬೆಳಗ್ಗೆ ಸಾವು ಕಂಡಿದೆ.

ಬನ್ನೇರುಘಟ್ಟದಿಂದ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಸಿಂಹ ಸರ್ವೇಶ ಕಳೆದ 4 ವರ್ಷಗಳಿಂದ ಲಯನ್ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಕಾಣಿಸಿಕೊಂಡಿತ್ತು. ವಯಸ್ಸಾಗಿದ್ದರೂ ಆರಾಮವಾಗಿದ್ದ ಸಿಂಹ ಬುಧವಾರ ವಾಂತಿ ಮಾಡಿಕೊಂಡಿತ್ತು. ಕೂಡಲೇ ಪಶು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಿಂಹ ಸಾವನ್ನಪ್ಪಿದೆ.

ಸಿಂಹಗಳ ವಾಡಿಕೆ ವಯಸ್ಸಿನ ಗಡಿಯಲ್ಲಿದ್ದ ಸಿಂಹ ಸರ್ವೇಶ ಹಿಮೋ ಫ್ರೋಟೋಜೋನ್ ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಈ ಸೋಂಕು ಕಾಣಿಸಿಕೊಳ್ಳುವ ಪ್ರಾಣಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನಲಾಗಿದೆ. ರಕ್ತಕಣಗಳನ್ನು ನಾಶ ಮಾಡುತ್ತಾ ಬರುವ ಸೋಂಕು ಅಂತಿಮವಾಗಿ ಪ್ರಾಣಿಯನ್ನು ಬಲಿ ತೆಗೆದುಕೊಳ್ಳುತ್ತದೆ. ಅನಾರೋಗ್ಯದ ಲಕ್ಷಣ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಕಾಯಿಲೆ ಉಲ್ಬಣಗೊಂಡಿರುತ್ತದೆ. ಸರ್ವೇಶ ಸಿಂಹವೂ ಪ್ರವಾಸಿಗರ ಅಚ್ಚುಮೆಚ್ಚಿನ ಆಕರ್ಷಣೀಯ ಸಿಂಹವಾಗಿತ್ತು. ವಯಸ್ಸು ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ ಎಂದು ಸಿಂಹಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

- - - -1ಎಸ್‌ಎಂಜಿಕೆಪಿ09: ಸಿಂಹ ಸರ್ವೇಶ.