ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಮಗೆ ಕೇವಲ ಎಂಜಿನಿಯರಿಂಗ್ ಪದವಿ ನೀಡುವ ಸಂಸ್ಥೆಯಾಗಿ ಮಾತ್ರವಲ್ಲ, ವ್ಯಕ್ತಿತ್ವ ವಿಕಸನಕ್ಕೆ ಗುರುಕುಲವೂ ಆಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಯುಬಿಡಿಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಬಿ.ಎಲ್.ಸಂತೋಷ್ ತಿಳಿಸಿದ್ದಾರೆ.

- ತಾವು ಓದಿದ ದಾವಣಗೆರೆ ಯುಬಿಡಿಟಿ ಕಾಲೇಜು ಬರೀ ಪದವಿ ನೀಡುವ ಸಂಸ್ಥೆಯಾಗಿರಲಿಲ್ಲ ಎಂದು ಅಭಿಮತ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಮಗೆ ಕೇವಲ ಎಂಜಿನಿಯರಿಂಗ್ ಪದವಿ ನೀಡುವ ಸಂಸ್ಥೆಯಾಗಿ ಮಾತ್ರವಲ್ಲ, ವ್ಯಕ್ತಿತ್ವ ವಿಕಸನಕ್ಕೆ ಗುರುಕುಲವೂ ಆಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಯುಬಿಡಿಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಬಿ.ಎಲ್.ಸಂತೋಷ್ ತಿಳಿಸಿದರು.

ನಗರದಲ್ಲಿ ಶನಿವಾರ ಯುಬಿಡಿಟಿ ಕಾಲೇಜಿನ ಅಮೃತ ಮಹೋತ್ಸವದ ಸಮಾರೋಪ ಹಾಗೂ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಷ್ಟಿತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಖ್ಯಾತಿಯ ಯುಬಿಡಿಟಿ ಕಾಲೇಜು ನಮಗೆ ಪದವಿ ನೀಡಿದ್ದಲ್ಲದೇ, ವ್ಯಕ್ತಿತ್ವ ವಿಕಸನದ ಗುರುಕುಲವೂ ಆಗಿತ್ತು ಎಂದರು.

ನಾವೆಲ್ಲಾ ಎಂಜಿನಿಯರಿಂಗ್ ಓದುವಾಗ ಕಂಪ್ಯೂಟರ್ ಸೈನ್ಸ್ ಆಗಷ್ಟೇ ಆರಂಭವಾಗಿದ್ದ ವಿಷಯವಾಗಿತ್ತು. ಕಾಲೇಜು ಪ್ರಾಧ್ಯಾಪಕರು ನಮಗೆ ಕೇವಲ ಪಠ್ಯದ ಪಾಠಗಳನ್ನು ಬೋಧಿಸುವುದಷ್ಟೇ ಅಲ್ಲ, ಜೀವನದ ಮೌಲ್ಯಗಳನ್ನು ತಿಳಿಸಿ ಕೊಡುತ್ತಿದ್ದರು. ನುರಿತ ಪ್ರಾಧ್ಯಾಪಕರು ನಮ್ಮ ಈ ಕಾಲೇಜಿನ ಆಸ್ತಿಯಾಗಿದ್ದರು. ಇದರಿಂದ ಗುಣಮಟ್ಟದ ಶಿಕ್ಷಣ ನಮಗೆಲ್ಲರಿಗೂ ಸಿಗುತ್ತಿತ್ತು. ಈ ಕಾಲೇಜಿನ ನನ್ನ ದಿನಗಳನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಒಂದು ಸರ್ಕಾರಿ ಕಾಲೇಜು, ದಾನಿಗಳಿಂದ ಬೆಳೆದ ಕಾಲೇಜು ಇಂದು 75 ವರ್ಷ ಯಶಸ್ವಿಯಾಗಿ ಸಾಗಿ ಬಂದಿರುವುದು ಒಂದು ಸವಾಲಿನ ಕೆಲಸವಾಗಿದೆ. ಕಾಲೇಜು ಹೊಸ ರೂಪ ಪಡೆಯಲು ವಿಟಿಯು ಸಾಕಷ್ಟು ಆಸಕ್ತಿ ವಹಿಸಿರುವುದು ಎದ್ದುಕಾಣುತ್ತದೆ. ಇದರ ಹಿಂದೆ ವಿಟಿಯು ಕುಲಪತಿ ಡಾ.ವಿದ್ಯಾಶಂಕರ್‌ರ ಕಾಳಜಿ ನಾವು ಮೆಚ್ಚಲೇ ಬೇಕು. ನಮ್ಮಲ್ಲಿ ವ್ಯಾಸಂಗ ಮಾಡಿದ ಬಹುತೇಕರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಇದಕ್ಕೆ ಕಾರಣ ಕಾಲೇಜಿನಲ್ಲಿದ್ದ ಶಿಸ್ತು. ಇಂದಿನ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುಬಿಡಿಟಿ ಹಳೇ ವಿದ್ಯಾರ್ಥಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಮಾಜಿ ಸಂಸದ ಜನಾರ್ಧನ ಸ್ವಾಮಿ, ಎಐಸಿಟಿಇ ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ಯುಬಿಡಿಟಿ ಕಾಲೇಜು ಪ್ರಾಚಾರ್ಯ ಡಾ.ಡಿ.ಪಿ.ನಾಗರಾಜಪ್ಪ ಇತರರು ಇದ್ದರು. ಇದೇ ವೇಳೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಂದ ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ, ಶಂಕು ಸ್ಥಾಪನೆ ನೇರವೇರಿತು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಹಳೇ ವಿದ್ಯಾರ್ಥಿಗಳಿಂದ ನಡೆಯಿತು. ಎಲ್ಲರನ್ನೂ ರಂಜಿಸಲು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ದಾವಣಗೆರೆ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಿತು. ನೂರಾರು ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಕಾಲೇಜು ದಿನ ಮೆಲಕು ಹಾಕಿದರು. ತಾವು ಓದಿದ ವಿಭಾಗದ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಮುಂಬರುವ ದಿನಗಳಲ್ಲಿ ಕಾಲೇಜನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕಡೆಯೂ ಚರ್ಚೆ ನಡೆಸಿದರು. ಕೆಲ ಹಳೇ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿಗೆ ದೇಣಿಗೆ ನೀಡಲು ಒಪ್ಪಿದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ಹೊಸ ಬ್ಲಾಕ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.

- - -

(ಬಾಕ್ಸ್‌) ನಮ್ಮ ಯುಬಿಡಿಟಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಈ ಕಾಲೇಜಿನ ರಾಯಭಾರಿಗಳಿದ್ದಂತೆ. ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಆಗಮಿಸಿದ ಕಾರಣ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಸಿಕ್ಕಂತಾಗಿದೆ. ಕಾಲೇಜಿನ ಮೇಲೆ ಸದಾ ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಗೌರವ ಹೀಗೆಯೇ ಇರಲಿ. ನಿಮ್ಮೆಲ್ಲರ ಸಹಕಾರದಿಂದ ಕಾಲೇಜನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯೋಣ.

- ಡಾ. ಎಸ್.ವಿದ್ಯಾಶಂಕರ್, ಕುಲಪತಿ, ವಿಟಿಯು.

- - -

-30ಕೆಡಿವಿಜಿ5: ದಾವಣಗೆರೆ ಯುಬಿಡಿಟಿ ಕಾಲೇಜಿನ ಸಮಾರೋಪದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಮಾಜಿ ಸಂಸದ ಜನಾರ್ದನ ಸ್ವಾಮಿ, ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ ಇತರರರು ಇದ್ದರು.