ಸಾರಾಂಶ
ಕುಷ್ಟಗಿ: ತಾಲೂಕಿನ ಕೇಸೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಉಚ್ಚಾಯ ಮಹೋತ್ಸವ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಜರುಗಿತು.ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರ ಮೂರ್ತಿಗೆ ಗಜೇಂಡಯ್ಯಸ್ವಾಮಿ ಹಿರೇಮಠ ಅವರಿಂದ ರುದ್ರಾಭಿಷೇಕ, ಬಿಲ್ವಾರ್ಚನೆ ಮಹಾಪೂಜೆಗಳು ಜರುಗಿದವು. ಆನಂತರ ಶರಣಯ್ಯ ಬನ್ನಿಗೋಳಮಠ ಅವರು ಹೋಮ-ಹವನದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಕ್ತರು ಹರಕೆಗಳು ಮುಟ್ಟಿಸಿದರು. ಸಾಮೂಹಿಕ ವಿವಾಹ ಕಾರ್ಯಕ್ರಮ, ಪುರವಂತರ ಮೆರವಣಿಗೆ ಶಾಲಾ ಮಕ್ಕಳ ಕೋಲಾಟ ಕಾರ್ಯಕ್ರಮಗಳು ನಡೆದವು.ಸಾಯಂಕಾಲ ಉಚ್ಚಾಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಭಕ್ತರು ಜಯಘೋಷವನ್ನು ಹಾಕುತ್ತಾ ಭಜನೆ ಡೊಳ್ಳು ಸಂಗೀತ ವಾಧ್ಯಗಳ ವೈಭವದಿಂದ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಮಂಡಕ್ಕಿಯನ್ನು ಸಮರ್ಪಿಸಿ ಭಕ್ತಿಯನ್ನು ಮೆರೆದರು ಹಾಗೂ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು.
ವೀರಭದ್ರೇಶ್ವರ ದೇವರ ಉಚ್ಚಾಯ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿ ಭಾವವನ್ನು ಮೆರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ತೆಂಗಿನಕಾಯಿ, ನೈವೇದ್ಯ ಅರ್ಪಿಸಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ಮೈ ನವಿರೇಳಿಸುವ ಪುರವಂತರ ಒಡಪುಗಳು: ತಾಲೂಕಿನ ಕೇಸೂರು ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಭಕ್ತರ ಸಮ್ಮುಖದಲ್ಲಿ ಪುರವಂತರ ಗುಗ್ಗಳೋತ್ಸವ ಹಾಗೂ ಅಗ್ನಿ ಹಾಯುವ ಧಾರ್ಮಿಕ ಕಾರ್ಯಕ್ರಮ ಜರುಗಿತು.ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ವೀರಭದ್ರೇಶ್ವರ ದೇವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ಬಿಲ್ವಾರ್ಚನೆ, ಅಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಅಗ್ನಿ ಪ್ರವೇಶದ ಕಾರ್ಯಕ್ರಮ, ಪುರವಂತರ ಮೆರವಣಿಗೆ ಧಾರ್ಮಿಕ ಕಾರ್ಯದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪುರವಂತರ ಗುಗ್ಗಳೋತ್ಸವದ ಮೆರವಣಿಗೆಯಲ್ಲಿ ಪುರವಂತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ಮೂರ್ತಿಗಳೊಂದಿಗೆ ಹೆಜ್ಜೆ ಹಾಕಿದರು. ಒಡಪುಗಳನ್ನು ಹೇಳುತ್ತಾ ಹರ ಓಂ ನಮಃ ಶಿವಾಯ, ವಕ್ರತುಂಡ ಮಹಾಕಾಯ। ಕೋಟಿಸೂರ್ಯ ಸಮಪ್ರಭಾ। ನಿರ್ವಿಘ್ನಂ ಕುರುಮೇ ದೇವ। ಅಹಹಾ ವೀರ... ಅಹಹಾ ರುದ್ರಾ, ಕರುಣಾ ಸಮುದ್ರ, ವೀರಭದ್ರ ಕಡೆಕಡೆ ಎಂದು ಹೆಜ್ಜೆ ಹಾಕುತ್ತಿರುವುದು ಕಂಡು ಬಂತು. ಈ ಮೆರವಣಿಗೆಯಲ್ಲಿ ಪುರವಂತರ ಒಡಪುಗಳು ಹಾಗೂ ಕುಣಿತಗಳು ಜಾತ್ರೆಯಲ್ಲಿ ನೋಡುಗರ ಮೈನವಿರೇಳಿಸಿತು.ಪುರವಂತರು ವಿಶೇಷವಾಗಿ ಕಾವಿ ಧೋತರ, ತಲೆಗೆ ಕಾವಿಯ ಪೇಟ, ತೋಳಿಗೆ ಬೆಳ್ಳಿಯ ನಾಗರ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಸೊಂಟಕ್ಕೆ ಗಂಟೆ, ಕತ್ತಿಗೆ ರುದ್ರಾಕ್ಷಿ ಮಾಲೆ, ಎದೆಯ ಮೇಲೆ ನರಸಿಂಹನ ಮುಖ, ಮುಂಗೈ, ತೋಳಿಗೂ ರುದ್ರಾಕ್ಷಿ ಸರ, ಸೊಂಟಕ್ಕೆ ಬಣ್ಣದ ಬಟ್ಟೆ ಧರಿಸಿ ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ನಿಂಬೆಹಣ್ಣಿನ ಶಸ್ತ್ರ ಹಿಡಿದು ದೇವರ ಭಾವಚಿತ್ರಗಳನ್ನು ಮೆರವಣಿಗೆಯ ಮಾಡಿ, ಕೊನೆಗೆ ಗಂಗೆಯ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ, ನೇರ ದೇವಸ್ಥಾನಕ್ಕೆ ಬಂದು ಒಡಪುಗಳನ್ನು ಉಣಬಡಿಸಿ, ಅಗ್ನಿಕುಂಡದಲ್ಲಿ ಹಾಯ್ದು ದರ್ಶನವನ್ನು ಪಡೆದರು.
ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯರು ಹಾಗೂ ಕೇಸೂರಿನ ಚಂದ್ರಶೇಖರ ದೇವರ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವೀರಭದ್ರೇಶ್ವರ ಮೂರ್ತಿಗೆ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜಾತ್ರೆಗೆ ಕಾಡಾ ನಿಗಮದ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ದೊಡ್ಡಬಸವ ಭಯ್ಯಾಪುರ ಹಾಗೂ ವಿವಿಧ ರಾಜಕೀಯ ನಾಯಕರು, ಗ್ರಾಪಂ ಸದಸ್ಯರು ಹಾಗೂ ಸಾವಿರಾರು ಭಕ್ತರ ದಂಡು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ಭಕ್ತಿಯ ಪರಾಕಾಷ್ಠೆ ಮೆರೆದರು. ಜಾತ್ರೆಯ ವೇಳೆಯಲ್ಲಿ ದೋಟಿಹಾಳ, ಕೇಸೂರ ಹಾಗೂ ಗುಡಿಕಲಕೇರಿ ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಇದ್ದರು.