ಸಾರಾಂಶ
ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಎಬಿವಿಪಿ ನಗರ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಮಹೋತ್ಸವದ 350ನೇ ವರ್ಧಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ಉಡುಪಿ ನಗರ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಮಹೋತ್ಸವದ 350ನೇ ವರ್ಧಂತಿಯಂದು ನಗರದ ವಿವಿಧ ವಿದ್ಯಾರ್ಥಿ ನಿಲಯದಲ್ಲಿ ವಿಶೇಷ ಉಪನ್ಯಾಸ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ ಡಿ. ಗಾಂವ್ಕರ್, ಇಂದು ವಿಶ್ವದಲ್ಲಿಯೇ ಬಲಿಷ್ಠ ನೌಕಾದಳಗಳಲ್ಲಿ ಭಾರತವೂ ಸೇರಿದೆ ಎಂದರೇ ಅದಕ್ಕೆ ಕಾರಣ ಶಿವಾಜಿ ಮಹಾರಾಜರು. ಅಂದಿನ ಸಂದರ್ಭದಲ್ಲಿ ಪೋರ್ಚುಗಿಸರನ್ನು ಎದುರಿಸಲು ನೌಕಾದಳದ ಅವಶ್ಯಕತೆಯನ್ನು ಅರಿತ ಶಿವಾಜಿ ನೌಕದಳಕ್ಕೆ ಅತ್ಯಂತ ಮಹತ್ವವನ್ನು ನೀಡಿದ್ದರು. ಅಲ್ಲದೆ ಅವರು ಸಣ್ಣ ಸೈನ್ಯಗಳಿಂದ ಗೆರಿಲ್ಲಾ ಮಾದರಿಯ ವಿಶೇಷ ಯುದ್ಧ ತಂತ್ರಗಳ ಮೂಲಕ ಅತ್ಯಂತ ಬಲಿಷ್ಠ ಪರಕೀಯ ಸೈನ್ಯಗಳನ್ನು ಬಗ್ಗು ಬಡಿದಿದ್ದರು. ಯುದ್ಧ ಮಾತ್ರವಲ್ಲದೇ ಅತ್ಯುತ್ತಮ ಆಡಳಿತಗಾರ ಇವರು ರೈತರು, ಬಡವರು ಮತ್ತು ಸಮಾಜದ ಎಲ್ಲಾ ವರ್ಗದವರಿಗೆ ಸಮಾನವಾಗಿ ಕಂಡಿದ್ದರು ಮತ್ತು ಕಲೆ, ಸಂಸ್ಕೃತಿ, ಸಾಹಿತ್ಯ, ಹೀಗೆ ಸರ್ವತೋಮುಖ ಅಭಿವೃದ್ಧಿಗೆ ಮಹತ್ವ ನೀಡಿದ್ದರು ಎಂದರು.
ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಬಿವಿಪಿ ತಾಲೂಕು ಸಂಚಾಲಕರಾದ ಅಜಿತ್ ಜೋಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಕೆ. ನಗರ ಹಾಸ್ಟೆಲ್ ಪ್ರಮುಖರಾದ ನವೀನ್ ಸಹ ಪ್ರಮುಖರಾದ ಧನ್ಯ ಮತ್ತು ಕಾರ್ಯಕಾರಿಣಿ ಸದಸ್ಯರಾದ ನಾಗರತ್ನ ಹಾಗೂ ಲ್ಯಾರಿ ಉಪಸ್ಥಿತರಿದ್ದರು.