ಉಡುಪಿ: ಜಿಲ್ಲೆಯಲ್ಲಿ 12 ಗಂಟೆಗಳಲ್ಲಿ 60.20 ಮಿ.ಮೀ. ಮಳೆ

| Published : Dec 04 2024, 12:35 AM IST

ಸಾರಾಂಶ

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್‌ ಚಂಡಮಾರುತದ ಪರಿಣಾಮ ಉಡುಪಿ ಜಿಲ್ಲಾದ್ಯಂತ ಭಾರಿ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೇವಲ 12 ಗಂಟೆಗಳಲ್ಲಿ 60.20 ಮಿ.ಮೀ. ಮಳೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್‌ ಚಂಡಮಾರುತದ ಪರಿಣಾಮ ಜಿಲ್ಲಾದ್ಯಂತ ಭಾರಿ ಮಳೆಯಾಗಿದೆ. ಕಾಪು ತಾಲೂಕಿನಲ್ಲಿ ಸಿಡಿಲಿಗೆ ಹಸುವೊಂದು ಬಲಿಯಾಗಿದೆ.ಕಾಪು ತಾಲೂಕಿನಲ್ಲಿ ಮುಸಲಧಾರ ಮಳೆಯಾಗಿದ್ದು, ಇಲ್ಲಿ ಸುಮಾರು 169 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ 108 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 113 ಮಿ.ಮೀ., ಬ್ರಹ್ಮಾವರ ತಾಲೂಕಿನಲ್ಲಿ 64, ಹೆಬ್ರಿ ತಾಲೂಕಿನಲ್ಲಿ 28.70, ಕುಂದಾಪುರ ತಾಲೂಕಿನಲ್ಲಿ 20.30, ಬೈಂದೂರು ತಾಲೂಕಿನಲ್ಲಿ 7.80 ಮಿ.ಮೀ. ಮಳೆಯಾಗಿದೆ.

ಮಂಗಳವಾರ ಕೂಡ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಚಂಡಮಾರುತದ ಪರಿಣಾಮ ಇನ್ನೂ ಒಂದೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ, ಕರಾವಳಿಯಲ್ಲಿ ಆರೆಂಜ್‌ ಅಲರ್ಟ್ ಘೋಷಣೆ ಮಾಡಿದೆ.

ಭಾರಿ ಮಳೆಗಾಳಿಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಸೋಮವಾರ ರಾತ್ರಿಯಿಡೀ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು. ಕಾಪು ತಾಲೂಕಿನ ಎಲ್ಲೂರು ಗ್ರಾಮದ ಶೇಖರ ಪೂಜಾರಿ ಎಂಬವರ ಹಸು ಸೋಮವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟಿದೆ.ಬ್ರಹ್ಮಾವರ ತಾಲೂಕಿನ 3 ಮನೆಗಳಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಇಲ್ಲಿನ ಕಾಡೂರು ಗ್ರಾಮದ ರಾಮಚಂದ್ರ ಆಚಾರಿ ಅವರ ಮನೆಗೆ 75,000 ರು., ನೀಲಾವರ ಗ್ರಾಮದ ರಾಧ ಶೆಟ್ಟಿ ಅವರ ಮನೆಗೆ 45,000 ರು. ಮತ್ತು ಪೆಜಮಂಗೂರು ಗ್ರಾಮದ ಭಾರತಿ ಅನಂದ ಎಂಬವರ ಮನೆಗೆ 30,000 ರು. ಗಳಷ್ಟು ನಷ್ಟವಾಗಿದೆ.

----------------

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಭಾರಿ ಗಾಳಿ, ಮಳೆ: ಹಾನಿ

ಕನ್ನಡಪ್ರಭ ವಾರ್ತೆ ಕಾರ್ಕಳಫೆಂಗಲ್ ಚಂಡಮಾರುತದ ಪರಿಣಾಮ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾನೆ ವರೆಗೆ ಸಿಡಿಲಿನಿಂದ ಕೂಡಿದ ಭಾರಿ ಮಳೆ ಸುರಿದಿದೆ.

ಹೆಬ್ರಿ ತಾಲೂಕಿನ ಗ್ರಾಮಗಳಾದ ಬೆಳ್ವೆ, ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ, ಬೇಳಂಜೆ, ಕುಚ್ಚೂರು, ಚಾರ, ಹೆಬ್ರಿ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ವರಂಗ, ಪಡುಕುಡೂರು, ಅಂಡಾರಿನಲ್ಲಿ ಉತ್ತಮ ಮಳೆಯಾಗಿದೆ. ಬೀಸಿದ ಭಾರಿ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದಿದ್ದ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.ಕಾರ್ಕಳ ತಾಲೂಕಿನ ಮರ್ಣೆ, ಶಿರ್ಲಾಲು, ಕೆರುವಾಶೆ, ಮಾಳ, ಮುಡಾರು, ದುರ್ಗಾ, ರೆಂಜಾಳ, ಕಲ್ಯಾ, ನಿಂಜೂರು, ಬೈಲೂರು, ನೀರೆ, ಕೌಡೂರು, ಕುಕ್ಕೂಂದೂರು ಭಾಗಗಳಲ್ಲೂ ಭಾರಿ ಮಳೆಯಾಗಿದೆ.

ಅಕಾಲಿಕ ಮಳೆಗೆ ವಿವಿಧೆಡೆ ಹಾನಿಯುಂಟಾಗಿದೆ. ನೀರೆ ಗ್ರಾಮದ ಜಯಲಕ್ಷ್ಮೀ ಕುಲಾಲ್ ಅವರ ಮನೆಯ ಕಾಂಪೌಂಡ್ ಕುಸಿದು ಹಾನಿಯಾಗಿದೆ. ಬೈಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ಗೋಡೆ ಬಿದ್ದು ನಷ್ಟ ಉಂಟಾಗಿದೆ. ನೂರಲ್ಬೆಟ್ಟು ಅಣ್ಣಾಜು ಜೈನ್ ಎಂಬವರ ವಾಸದ ಮನೆ ಮೇಲೆ ಅಡಕೆ ಮರ ಬಿದ್ದು ಸುಮಾರು ಹತ್ತು ಸಾವಿರ ರು.ಗೂ ಹೆಚ್ಚಿನ ಹಾನಿ ಸಂಭವಿಸಿದೆ.ಕಾರ್ಕಳ ನಗರದಲ್ಲಿ 154 ಮಿ.ಮೀ. ಮಳೆಯಾಗಿದ್ದರೆ, ಇರ್ವತ್ತೂರಿನಲ್ಲಿ 105.6 ಮಿ.ಮೀ., ಕೆದಿಂಜೆಯಲ್ಲಿ 178.0 ಮಿ.ಮೀ., ಅಜೆಕಾರು 63.2 ಮಿ.ಮೀ., ಸಾಣೂರು 143.8 ಮಿ.ಮೀ., ಕೆರ್ವಾಶೆ 62.2 ಮಿ.ಮೀ., ಮುಳಿಕಾರು 46.2 ಮಿ.ಮೀ., ಒಟ್ಟು ಸರಾಸರಿ 107.6 ಮಿ.ಮೀ. ಮಳೆಯಾಗಿದೆ.