ಸಾರಾಂಶ
ಉಡುಪಿ ನಿಮಗೆಲ್ಲ ಒಂದು ಚಿರಪರಿಚಿತವಾದ ಹೆಸರು. ಒಂದಲ್ಲ ಹಲವು ರೀತಿಯಾಗಿ ಉಡುಪಿಯ ಕೀರ್ತಿ ದಶದಿಕ್ಕುಗಳಲ್ಲಿ ಹಬ್ಬಿದೆ. ಹಲವು ಪವಾಡಗಳನ್ನು ಸ್ವತಃ ನಿರ್ಮಿಸಿ, ತನ್ನ ಯೋಗ್ಯತೆಯನ್ನು, ಘನತೆಯನ್ನು ಕಾಪಾಡಿಕೊಂಡು ಬಂದ ನಮ್ಮೂರು ಒಂದು ಪ್ರೇಕ್ಷಣೀಯ ಸ್ಥಳವೂ ಹೌದು, ಆಕರ್ಷಕ ಕೇಂದ್ರವೂ ಹೌದು.ಉಡುಪಿಯ (ಕರ್ನಾಟಕ ರಾಜ್ಯದ ಅವಿಭಾಜಿತ ದ.ಕ. ಜಿಲ್ಲೆಯಲ್ಲಿ ೧೩.೧೫ ಪಶ್ಚಿಮದಲ್ಲಿದೆ) ಒಂದು ಪ್ರವರ್ಧಮಾನಕ್ಕೆ ಬರುತ್ತಿರುವ ಪಟ್ಟಣವಾಗಿದೆ. ಇದು ಜಿಲ್ಲೆಯ ಕೇಂದ್ರ ತನ್ನದೇ ಆದ ವೈಶಿಷ್ಟ್ಯದಿಂದ ಆಧ್ಯಾತ್ಮಿಕ ಪ್ರಾಮುಖ್ಯತೆಯಿಂದ, ಪ್ರಕೃತಿಯ ಸೊಬಗಿನಿಂದ, ಜನ ಜೀವನದ ವೈವಿಧ್ಯತೆಯಿಂದ ಒಂದು ವಿಶಿಷ್ಟ ಸ್ಥಾನ ಸಂಪಾದಿಸಿದೆ. ಉಡುಪಿ ಕೇವಲ ಹೋಟೆಲಿನ ಪ್ರಚಾರದಿಂದ ಖ್ಯಾತಿ ಪಡೆಯದೆ ಅದು ಒಂದು ಆದರ್ಶವಾದ ವೈಭವದಿಂದಲೇ ಉನ್ನತಿಯ ದಾರಿ ಹಿಡಿದಿದೆ.
ನಮ್ಮೂರಿಗೆ ಕಡಲು ಒಲಿದಿದ್ದಾಳೆ. ಈ ಕಡಲ ಕರೆಯಲ್ಲಿ ಶ್ರೀ ಮಧ್ವಚಾರ್ಯರಿಗೆ ಶ್ರೀ ಕೃಷ್ಣನು ಒಲಿದು ಬಂದ ತಾಣದಲ್ಲಿ ನೀವು ಸೂರ್ಯಾಸ್ತವನ್ನು ನೋಡುವಿರಾದರೆ ನಿಮ್ಮ ಸುಪ್ತ ಭಾವನೆಗಳು ಪುಟಿದೇಳುವುದು ನಿಶ್ಚಯ. ಅಸ್ತಮಯ ಸೂರ್ಯನ ಸೊಬಗನ್ನು ವೀಕ್ಷಿಸಲು ಮಲ್ಪೆಯೇ ಸರಿಯಾದ ತಾಣ. ಸಮುದ್ರ ತೀರದ ಅನತಿ ದೂರದಲ್ಲಿರುವ ತೆಂಗಿನ ತೋಟದ ದ್ವೀಪ, ಟಿಪ್ಪುಸುಲ್ತಾನನ ಕೋಟೆಯಿರುವ ಬಂಡೆಕಲ್ಲಿನ ದ್ವೀಪಗಳು ಬಹು ರಮ್ಯವಾಗಿವೆ. ಮಲ್ಪೆಯ ಕಡಲು ತಡಿಯಿಂದ ಎರಡು ಮೈಲುಗಳ ಅಂತರದಲ್ಲಿರುವ ಬಹದ್ದರಗಡ, ಸೈಂಟ್ ಮೇರಿ ದ್ವೀಪಗಳು ಸಂದರ್ಶಕರಿಗೆ ಸಮುದ್ರಯಾನದ ಚೇತನದಾಯಿ ನೆನಪನ್ನು ಚಿರಂತನವಾಗಗಿ ಉಳಿಸಬಲ್ಲದು. ವ್ಯವಹಾರಕವಾಗಿ ಮಲ್ಪೆ ಭಾರತದಲ್ಲೇ ಅತಿ ದೊಡ್ಡ ಮೀನಿನ ಕೇಂದ್ರ, ಇಲ್ಲಿ ಹಂಚಿನ ಕಾರ್ಖಾನೆ, ಮೀನಿನೆಣ್ಣೆ ಕಾರ್ಖಾನೆಗಳೊಂದಿಗೆ ಸಿಗಡಿ ಮೀನನ್ನು ಪರದೇಶಗಳಿಗೆ ರಫ್ತು ಮಾಡಿ, ತನ್ಮೂಲಕ ಭಾರತಕ್ಕೆ ಡಾಲರನ್ನು ಒದಗಿಸುವಂತಹ ಖಾಸಗಿ ಕಾರ್ಖಾನೆಯೊಂದಿದೆ.ಇಲ್ಲಿನ ಮಣ್ಣಿನಲ್ಲಿ ಜಡತೆಯಿಲ್ಲ, ಪ್ರಕೃತಿಯಲ್ಲಿ ಮಂದತೆಯಿಲ್ಲ, ಜನರಲ್ಲೂ ಅನಾಸಕ್ತಿ ಕಡಿಮೆ. ಎಲ್ಲರೂ ಒಂದು ವಿಧದ ಉತ್ಸಾಹ ಪ್ರವೃತ್ತಿಯಿವರೇ, ಚಟುವಟಿಕೆಯವರೇ, ಒಂದಲ್ಲ ಒಂದು ರೀತಿಯಲ್ಲಿ ಅಭಿವೃದ್ಧಿಯನ್ನು ಹಾರೈಸುವವರೇ ಆಗಿದ್ದಾರೆ. ಇಲ್ಲಿಯ ಜನರಲ್ಲಿ ಸೌಹಾರ್ದ ಭಾವನೆ ಇದೆ. ಆಚಾರ್ಯತ್ರಯರಲ್ಲಿ ಒಬ್ಬರಾದ ಶ್ರೀಮಧ್ವಾಚಾರ್ಯರ ನೆಲೆವೀಡು ಉಡುಪಿ. ಅವರು ಈ ಚಿಕ್ಕ ಕೇಂದ್ರದಲ್ಲಿ ಪ್ರಪಂಚದಲ್ಲೇ ಹಿರಿಯ ಭಕ್ತಿ ಪಂಥವಾದ ಮಧ್ವಮತದ ಸಾರವನ್ನು ಲೋಕಕ್ಕೆ ಸಾರಿದರು. ಆತ್ಮನಿಗೂ, ಪರಮಾತ್ಮನಿಗೂ ಭೇದವಿದೆಯೆಂದೂ ಪರಮಾತ್ಮನ ಸಾನಿಧ್ಯಕ್ಕೆ ಭಕ್ತಿಯೇ ಪರಮಶ್ರೇಷ್ಠ ಸಾಧನವೆಂದೂ ಬೋಧಿಸಿದರು. ಶ್ರೀ ಮಧ್ವಚಾರ್ಯರು ದ್ವಾರಕೆಯ ಹಡಗನ್ನು ಮಲ್ಪೆ ಸಮುದ್ರದಲ್ಲಿ ರಕ್ಷಿಸಿ, ಅದರೊಳಗಿನ ಎರಡು ಗೋಪಿಚಂದನದ ಹೆಂಟೆಯನ್ನು ಕಾಣಿಕೆಯಾಗಿ ಪಡೆದು, ಅದನ್ನು ಒಡೆದು ನೋಡುವಾಗ ಒಂದರಲ್ಲಿ ಶ್ರೀ ಬಲರಾಮ ಮೂರ್ತಿ, ಮತ್ತೊಂದರಲ್ಲಿ ರುಕ್ಮಿಣಿಕರಾರ್ಚಿತ ಶ್ರೀಕೃಷ್ಣನ ಮೂರ್ತಿ ಇದ್ದಿತಂತೆ. ಬಲರಾಮ ಮೂರ್ತಿಯನ್ನು ಮಲ್ಪೆಯ ಸಮೀಪ ಸಮುದ್ರ ಕಿನಾರರೆಯ ವಡಭಾಂಡೇಶ್ವರ ಎಂಬಲ್ಲಿ ಪ್ರತಿಷ್ಠಾಪಿಸಿ, ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು.ಉಡುಪಿ ಈ ರೀತಿ ಅನಾದಿಯಿಂದಲೂ ಪವಿತ್ರ ಕ್ಷೇತ್ರವಾಗಿದ್ದರೂ, ಕ್ರಿ.ಶ. ೧೨೩೮-೧೩೧೭ ರವರೆಗೆ ಶ್ರೀ ಮಧ್ವಾಚಾರ್ಯರ ಅವತಾರವಾಗಿ ಅವರು ಇಲ್ಲಿಯೇ ತಮ್ಮ ಮಧ್ವಮತ ಸಿದ್ಧಾಂತವನ್ನು ಪ್ರಚಾರಗೊಳಿಸುವ ಕೇಂದ್ರವಾಗಿ ಆಚರಿಸಿದ್ದರಿಂದ ಉಡುಪಿಯ ಕೀರ್ತಿ ಜಗದ್ವಿಖ್ಯಾತವಾಯಿತು. ಉಡುಪಿಯ ಶ್ರೀ ಕೃಷ್ಣನ ದೇವಸ್ಥಾನವೂ ಬಹುಶಃ ಭಾರತದ ಇನ್ನಾವ ದೇವಸ್ಥಾನಗಳಲ್ಲೂ ಕಾಣಸಿಗದಂತಹ ಕ್ರಮಬದ್ಧವಾದ ಆಡಳಿತೆಯಲ್ಲಿ ಬೆಳೆದು ಬಂದಿದೆ. ಇಲ್ಲಿನ ಪೂಜಾ ವಿನಿಯೋಗಗಳ ನಿಯಮಿತತೆ, ವೈಭವತೆ, ಶ್ರೀ ಕೃಷ್ಣ ಮಠದ ವ್ಯವಸ್ಥೆ, ಉತ್ಸವ ವೈಭವ ಇವೆಲ್ಲ ನಿಜಕ್ಕೂ ಮೆಚ್ಚುವಂತಹದಾಗಿದ್ದು ಯಾತ್ರಿಕರ ಹೃದಯವನ್ನು ಪುಳಕಿತಗೊಳಿಸುತ್ತದೆ. ನಾಸ್ತಿಕರ ಹೃದಯದಲ್ಲಿ ಆಸ್ತಿಕತೆಯ ಅವಾಹನೆ ಮಾಡಲು ಶಕ್ತಿ ಸಂಪನ್ನವಾಗಿದೆ.
ಶ್ರೀ ಕೃಷ್ಣನ ಮೂರ್ತಿಯ ಬಹು ಸುಂದರವಾದುದು. ಕರಿಯ ವಾಸುದೇವ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದೆ. ಕಲಾತ್ಮಕವಾಗಿ ಕೂಡಾ ಪ್ರಪಂಚದ ಶಿಲ್ಪ ಕಲೆಯ ಪ್ರತಿರೂಪದಂತಿದೆ.ಇದು ದ್ವಾರಕೆಯಲ್ಲಿ ರುಕ್ಮಿಣಿ ಹಾಗೂ ಆಚಾರ್ಯರ ಕೈಗಳಿಂದ ಪೂಜೆಗೊಂಡ ಬಾಲಕೃಷ್ಣನ ಮುದ್ದು ವಿಗ್ರಹ. ಈ ರೀತಿಯ ವಿಗ್ರಹ ದೇಶದಲ್ಲೆಲ್ಲಾ ಇದೊಂದೇ ಎಂದು ಹೇಳಲಾಗುತ್ತಿದೆ. ಕೈಯಲ್ಲಿ ಕಡಗೋಲು, ಹಸ್ತಕೌಪೀನದ ಉಡುಗೆ, ತಲೆಮುಡಿ, ಮೈತುಂಬ ವಿವಿಧ ರೀತಿಯ ಆಭರರಣ ಈ ಮೂರ್ತಿಯಲ್ಲಿವೆ.
ಶ್ರೀ ಕೃಷ್ಣನ ಒಳಗಡೆಯ ಎಡಬಲ ದಿಕ್ಕುಗಳಲ್ಲಿ ಮುಖ್ಯಪ್ರಾಣ ಹಾಗೂ ಗರುಡ ವಿಗ್ರಹಗಳಿವೆ. ಮುಖ್ಯಪ್ರಾಣ ದೇವರ ಕಾರ್ಣಿಕ ಬಹಳವಿದೆ. ಪರ್ಯಾಯ ಕುಳಿತುಕೊಳ್ಳಲಿರುವ ಶ್ರೀಗಳವರು ಪರ್ಯಾಯ ಕಾರ್ಯಗಳ ಎಲ್ಲ ಭಾರವನ್ನು ಈ ಮುಖ್ಯ ಪ್ರಾಣನಿಗೆ ಹೊರಿಸಿ, ತಮ್ಮ ಪರ್ಯಾಯ ಚಟುವಟಿಕೆಗಳನ್ನು ನಿಶ್ಚಿಂತೆಯಿಂದ ನಿರ್ವಹಿಸಿಕೊಂಡು ಹೋಗುತ್ತಾರೆ. ಶ್ರೀಗಳವರು ಕುಳಿತುಕೊಳ್ಳುವ ಸಿಂಹಾಸನ ಶ್ರೀ ಆಚಾರ್ಯ ಮಧ್ವರು ಕುಳಿತುಕೊಳ್ಳುತ್ತಿದ್ದ ಮೂಲ ಪೀಠ. ಇಂದಿಗೂ ಈ ಪೀಠದಲ್ಲಿ ಪರ್ಯಾಯ ಶ್ರೀಗಳು ಮಾತ್ರಕುಳಿತುಕೊಳ್ಳುತ್ತಾರೆ. ಕೋಣೆಯಲ್ಲಿರುವ ದೇವರು ಆಯಾ ಮಠದ ಆರಾಧನಾ ದೇವರು, ಭೋಜನ ಶಾಲೆ, ಸ್ವಾಮಿಗಳ ಪಂಕ್ತಿಯ ಚೌಕಿ, ಉಗ್ರಾಣದ ಬಡಗುಮಾಳಿಗೆ, ಸ್ವಾಮಿಗಳ ವಿಶ್ರಾಂತಿ ಧಾಮದ ವಸಂತಮಹಲು, ಅದರ ಪಕ್ಕದಲ್ಲಿರರುವ ಕೀರ್ತಿಶೇಷ ಶ್ರೀ ಪಾದಂಗಳವರುಗಳ ವೃಂದಾವನ, ಅದರ ಸಮೀಪವಿರುವ ಗೋಶಾಲೆ ಇವೆಲ್ಲ ನೋಡತಕ್ಕವು. ವಸಂತಮಹಲಿನ ಎದುರುಗಡೆ ಸುಬ್ರಮಣ್ಯ ದೇವರ ಹಾಗೂ ನವಗ್ರಹಗಳ ಗುಡಿಯಿದೆ. ಗೋಶಾಲೆಯಲ್ಲಿ ಹಿಂದುಗಡೆ ಬಹು ಆಕರ್ಷಕವಾದ ಕಲಾತ್ಮಕ ರೀತಿಯ ಕಟ್ಟಿಗೆಯ ಸಂಗ್ರಹದ ರಥವನ್ನು ಕಾಣಬಹುದು. ಮಧ್ವ ಸರೋವರದ ಮೂಲೆಯಲ್ಲಿ ಗಂಗೆ ಬಂದ, ನೆನಪಿಗಾಗಿ ಭಾಗೀರಥಿ ಗುಡಿಯನ್ನು ಶ್ರೀ ಅದಮಾರು ಮಠದ ೨೭ನೇ ಯತಿಗಳಾದ ಶ್ರೀ ಶ್ರೀ ವಿಭುದಪ್ರಿಯತೀರ್ಥರು ಕಟ್ಟಿಸಿದರು. ಇಂದಿಗೂ ೧೨ ವರ್ಷಗಳಿಗೊಮ್ಮೆ ಈ ಮಧ್ವ ಸರೋವರದಲ್ಲಿ ಗಂಗೆಯ ಒಳಪ್ರವಾಹ ಹರಿದು ಬರುತ್ತಿದೆ. ಒಟ್ಟಿನಲ್ಲಿ ಶ್ರೀ ಕೃಷ್ಣ ದೇವಸ್ಥಾನವು ಭುವೈಕುಂಠವೇ.ಶ್ರೀ ಮಧ್ವಾಚಾರ್ಯರಿಂದ ಸನ್ಯಾಸ ಪಡೆದ ಎಂಟು ಮಂದಿ ಸ್ವಾಮಿಗಳವರ ಮಠವು ಈ ರೀತಿಯಿದೆ.೧.ಶ್ರೀ ಸೋದೆ ಮಠ೨. ಶ್ರೀ ಶೀರೂರು ಮಠ
೩. ಶ್ರೀ ಕಾಣಿಯೂರು ಮಠ೪. ಶ್ರೀ ಪೇಜಾವರ ಮಠ೫. ಶ್ರೀ ಪಲಿಮಾರು ಮಠ
೬. ಶ್ರೀ ಅದಮಾರು ಮಠ೭. ಶ್ರೀ ಕೃಷ್ಣಪುರ ಮಠ
೮. ಶ್ರೀ ಪುತ್ತಿಗೆ ಮಠ.ಉಡುಪಿಯ ಕೇಂದ್ರ ಸ್ಥಳದಲ್ಲಿ ಶ್ರೀ ಕೃಷ್ಣನ ದೇವಸ್ಥಾನವಿದೆ. ಈ ದೇವಸ್ಥಾನದ ಉತ್ಸವಾದಿಗಳಿಗೆ ಅನುಕೂಲವಾಗಿ ರಥೋತ್ಸವದ ಬೀದಿಯು ಚಕ್ರಾಕಾರದಲ್ಲಿದ್ದು ರಥಗಳು ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಗಳಿಗೆ ಒಂದು ಮಹಾ ಪ್ರದಕ್ಷಿಣೆ ಬರುತ್ತದೆ.ಶ್ರೀ ಕೃಷ್ಣ ದೇವಸ್ಥಾನದ ಎದುರುಗಡೆಯ ಪಕ್ಕದಲ್ಲೇ ಮಧ್ವ ಸರೋವರದಿದೆ. ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಸುಂದರ ಗೋಪುರದಲ್ಲೇ ಕನಕನ ಕಿಂಡಿಯಿದೆ. ಇದು ೧೪ನೇ ಶತಮಾನದ ಕಥೆ. ಮಹಾತ್ಮ ಕನಕದಾಸನಿಗೆ ಒಲಿದು, ಶ್ರೀ ಕೃಷ್ಣನು ಪೂರ್ವದಿಕ್ಕಿನಲ್ಲಿ ಮುಖಮಾಡಿದ್ದವನು ಪಶ್ಚಿಮಕ್ಕೆ ಆ ಕಿಂಡಿಗೆದುರಾಗಿ ತಿರುಗಿದನೆಂದೂ, ಈಗ ಪಶ್ಚಿಮ ದಿಕ್ಕಿಗೆ ಮುಖಮಾಡಿ ಶ್ರೀ ಕೃಷ್ಣನ ಮೂರ್ತಿ ಇರುವುದನ್ನು ಕಾಣಬಹುದು. ಈ ಗೋಪುರದ ಎದುರುಗಡೆ ಕನಕನ ಕಿಂಡಿಯಿದೆ. ಇಲ್ಲೇ ಕೃಷ್ಣನ ದರ್ಶನ ಮೊದಲು ಮಾಡುವುದು ವಾಡಿಕೆ. ಈ ಗೋಪುರದ ಎದುರುಗಡೆ ಒಂದು ಮಂಟಪವಿದೆ. ಅದರಲ್ಲಿ ತಂಬೂರಿ ಹಿಡಿದು ನಿಂತ ಕನಕದಾಸರ ಕರಿಶಿಲೆಯ ಬೃಹತ್ ವಿಗ್ರಹವಿದೆ. ಅವರ ಪಕ್ಕದಲ್ಲೇ ತೆಂಕು ಬದಿಯಲ್ಲಿ ಶಿಲಾಸ್ತಂಭವಿದೆಯಲ್ಲಾ. ಅದು ಶ್ರೀ ಅನಂತೇಶ್ವರ ದೇವಸ್ಥಾನದ ಮುಂಭಾಗ. ಇದು ಉಡುಪಿಯ ಅನಾದಿ ದೇವಸ್ಥಾನ. ಮೊದಲು ಜೈನ ಬಸದಿಯಾಗಿತ್ತೆಂದು ಹೇಳುತ್ತಾರೆ. ಈ ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿದೆ. ಈ ಅಷ್ಟಮಠಗಳಲ್ಲದೆ ಶ್ರೀ ಅಣ್ಣಾಚಾರ್ಯ ಮಠ, ಪಕ್ಕದಲ್ಲಿ ಮುಳುಬಾಗಿಲು ಮಠ, ತೆಂಕಪೇಟೆಗೆ ತಾಗಿ ವ್ಯಾಸರಾಯ ಮಠ, ಅದಕ್ಕೆ ತಾಗಿ ಭೀಮನಕಟ್ಟೆ ಮಠ, ಪೇಜಾವರ ಮಠ ಹಾಗೂ ಪಲಿಮಾರು ಮಠದ ಮಧ್ಯೆ ಶ್ರೀ ಉತ್ತರಾಧಿ ಮಠ, ಶ್ರೀ ಕೃಷ್ಣಾಪುರ ಮಠಕ್ಕೆ ತಾಗಿ ಬಲ ಪಕ್ಕದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದೆ. ಈ ಮಠಗಳೆಲ್ಲ ರಥಬೀದಿಯ ಸುತ್ತಿನಲ್ಲೇ ಇರುವುದು ಒಂದು ವಿಶೇಷ. ಇಲ್ಲಿನ ದೇವಸ್ಥಾನಗಳ ಮಾತು ಹೀಗಾದರೆ ಇಲ್ಲಿನ ಜೀವನವೂ ಒಂದು ಅಚ್ಚುಕಟ್ಟಿನ ಚೌಕಟ್ಟಿನಲ್ಲಿದೆ. ಉಡುಪಿ ಕೇವಲ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡದ್ದಲ್ಲ. ಉಡುಪಿಯ ಜನ ಸಾಹಸಿಗಳು. ಸ್ವಾವಲಂಬನ ಜೀವನಕ್ಕಾಗಿ ಅನ್ಯೋನ್ಯತಾ ಸೌಹಾರ್ದತೆಯಲ್ಲಿ ಬಾಳುವುದಕ್ಕಾಗಿ ಉತ್ಸಾಹದಲ್ಲಿ ದುಡಿಯತಕ್ಕವರು. ಇವರು ಕಟ್ಟಿದ ಸಂಸ್ಥೆಗಳ ಪರಿಚಯವನ್ನು ತಿಳಿದುಕೊಂಡು ಯಾರೇ ಆದರೂ ಉಡುಪಿ ಜನರ ನಿರ್ವ್ಯಾಜ ಅಂತಃಕರಣಕ್ಕೆ ಮನ ಸೋಲದಿರದು.
ಶ್ರೀ ಪುರಂದರದಾಸರು, ಶ್ರೀ ಕನಕದಾಸರು ಈ ಜಿಲ್ಲೆಯನ್ನು ಸಂದರ್ಶಿಸಿ ಹಾಡಿ ಹೊಗಳಿದ್ದಕ್ಕೆ ದಾಖಲೆ ಇದೆ. ಮಹಾಮುನಿ ಶ್ರೀ ವಾದಿರಾಜ ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಹಲವು ಗ್ರಂಥ, ಕೃತಿರತ್ನಗಳನ್ನು ರಚಿಸಿದ್ದಾರೆ. ವಾದಿರಾಜ ಸ್ವಾಮಿಗಳಂತವರೇ ನಮ್ಮ ಜಾನಪದ ಗೀತೆಗಳಿಗೆ ಮಾರುಹೋಗಿ, ತಾವು ಅದೇ ಧಾಟಿಯ್ಲಿ ಕೃತಿ ರಚಿಸಿದ್ದಾರೆ. ಕೇವಲ ಜೊಳು ಮಾತಿನ ಸರಣೀಯದಾಗಿರದೆ ಈ ಗೀತೆಗಳಲ್ಲಿ ತುಂಬು ವೇದಾಂತ, ಯೋಗ್ಯ ಮಾರ್ಗದರ್ಶನವಿರುವುದನ್ನು ಗಮನಿಸಬಹುದಾಗಿದೆ. ಲಕ್ಷ್ಮೀ ಶೋಭನ ಹಾಡುಗಳು, ಪಾಡ್ದನಗಳು, ಬೀಸುವ ಕಟ್ಟುವ, ಗದ್ದೆಯಲ್ಲಿ ನೇಜಿ ನೆಡುವ ಹಾಡುಗು – ಇವೆಲ್ಲ ತುಂಬಾ ಪ್ರಭಾವಿತವಾಗಿದೆ. ದಾಸ ಸಾಹಿತ್ಯದ ಬಗ್ಗೂ ಈ ಜಿಲ್ಲೆ ಸಾಕಷ್ಟು ಕಾಣಿಕೆ ನೀಡಿದೆ. ದಿವಂಗತ ಪಾವಂಜೆ ಗುರುರಾಯರ ದಾಸ ಸಾಹಿತ್ಯದ ಹಲವಾರು ಸಂಪುಟಗಳನ್ನು ಪ್ರಕಟಿಸಿದ್ದಾರೆ. ಶ್ರೀ ಮಧ್ವಾಚಾರ್ಯರು ತಾತ್ವಿಕ ಗ್ರಂಥಗಳಂತೂ ಒಂದು ಮತಧರ್ಮದ ನೇರ ಪ್ರತಿಪಾದನೆಯಾಗಿದೆ.ಉಡುಪಿ ಜಿಲ್ಲೆ ಹಲವಾರು ಪ್ರಸಿದ್ಧ ಸಾಹಿತಿಗಳನ್ನು ನೀಡಿದೆ. ಇನ್ನೂ ಅನೇಕ ತರುಣ ಸಾಹಿತಿಗಳೂ, ಸಮರ್ಥ ಲೇಖಕರೂ, ಪ್ರತಿಭಾನ್ವಿತ ಪತ್ರಿಕೋದ್ಯಮಿಗಳೂ ಉಡುಪಿ ಜಿಲ್ಲೆಯವರೇ. ಇಲ್ಲಿನ ಭೂತದ ಕೋಲ, ಕೋಳಿ ಅಂಕ, ಕಂಬಳಗಳು ಬೇರೆಲ್ಲೂ ನೋಡಲು ಸಿಗದೆ, ಇಲ್ಲಿ ಜಾನಪದ ಜನರ ಚಳುವಳಿಯ ಕಲಾರಾಧನೆ ಎನ್ನಬಹುದು. ಪ್ರತಿಯೊಂದು ತನ್ನ ಗುಣ ವಿಶೇಷಣಗಳಿಂದ ಪ್ರಾಧಾನ್ಯತೆ ಪಡೆದಿದೆ. ಪಾಣೆಯರ ಕುಣಿತ, ಹೊಲೆಯರ ಡೋಲು, ಕೊರಗರ ನೃತ್ಯ, ನಾಗನೃತ್ಯ (ನಾಗಮಂಡಲ ಸೇವೆ) ಇವೆಲ್ಲವುಗಳಲ್ಲೂ ಒಂದು ವೈವಿದ್ಯತೆ ಹಾಗೂ ಪರಂಪರಾಗತ ಅವಿಷ್ಕಾರವನ್ನು ನೋಡಬಹುದು.ಉಡುಪಿಯ ಜನರಭಾಷೆ ತುಳು. ಆದರೂ ಕನ್ನಡ ಎಲ್ಲರಿಗೂ ಗೊತ್ತಿದೆ. ಕೊಂಕಣಿಯ ಒಂದು ವರ್ಗದ ಮನೆ ಮಾತಾಗಿ ನಮ್ಮ ಜನರಲ್ಲೊಂದು ಛಾಯೆ ಪಸರಿಸಿದ್ದರೂ, ಅದಕ್ಕೊಂದು ಗಣನೀಯ ಸ್ಥಾನವಿಲ್ಲ.
ಇದೋ ನಮ್ಮ ಉಡುಪಿಗೆ ಸುಸ್ವಾಗತ !ಕೃಷ್ಣಾಯ ವಾಸುದೇವಾಯ | ದೇವಕೀನಂದನಾಯ ಚ|
ನಂದಗೋಪ ಕುಮಾರಾಯ | ಗೋವಿಂದಾಯ ನಮೋ ನಮಃ ||-ಎನ್. ನಾರಾಯಣ ಬಲ್ಲಾಳ