ಸಾರಾಂಶ
ಎಪಿಎಂಸಿ ಆವರಣದ ದುರವಸ್ಥೆಯನ್ನು ಖಂಡಿಸಿ ವರ್ತಕರು ಮಂಗಳವಾರ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಆದಿ ಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದ ದುರವಸ್ಥೆಯನ್ನು ಖಂಡಿಸಿ ಹಲವು ದಿನಗಳಿಂದ ಕಪ್ಪು ಬಾವುಟ ಕಟ್ಟಿ ವ್ಯಾಪಾರದ ಜೊತೆಗೆ ಪ್ರತಿಭಟನೆ ನಡೆಸಿದರೂ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆರೋಪಿಸಿ ವರ್ತಕರು ಮಂಗಳವಾರ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.ವರ್ತಕರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಎಪಿಎಂಸಿಯ ಪ್ರಭಾರ ಕಾರ್ಯದರ್ಶಿ ಗೋಪಾಲ್ ತಿಪ್ಪಣ್ಣ ಕಾಕನೂರ ಅವರು ವಾಹನದಿಂದ ಇಳಿಯದೇ, ಯಾಕೆ ಪ್ರತಿಭಟನೆ ನಡೆಸುತ್ತಿದ್ದೀರಿ? ಜನರಿಗೆ ತೊಂದರೆ ನೀಡಬೇಡಿ ಎಂದರು.ಹಲವು ದಿನಗಳಿಂದ ಕಪ್ಪು ಬಾವುಟ ಕಟ್ಟಿ ವ್ಯಾಪಾರ ನಡೆಸಿದರೂ ತಮ್ಮ ಗಮನಕ್ಕೆ ಬಂದಿಲ್ಲವೇ ಎಂದು ವರ್ತಕರು ಪ್ರಶ್ನಿಸಿದರು. ಮಾತನಾಡದೇ ಗೋಪಾಲ್ ಅವರು ತಮ್ಮ ಕಚೇರಿಗೆ ತೆರಳಿದರು.ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವರ್ತಕ ಪ್ರಭುಗೌಡ, ಮಳೆ ಬಂದರೆ ಎಪಿಎಂಸಿ ಆವರಣದಲ್ಲಿ ನೀರು ತುಂಬಿಕೊಂಡು ಕೆಸರುಮಯವಾಗುತ್ತದೆ. ಅದರಲ್ಲೇ ಕುಳಿತು ವ್ಯಾಪಾರ ಮಾಡುವ ದುರವಸ್ಥೆ ನಮ್ಮದು. ತರಕಾರಿ ಹಣ್ಣುಹಂಪಲುಗಳು ಮಳೆಯಿಂದ ಒದ್ದೆಯಾಗಿ ಹಾಳಾಗುತ್ತವೆ. ದಿನ ಇಲ್ಲಿನ ಅವ್ಯವಸ್ಥೆ ಕಂಡು ಗ್ರಾಹಕರು ನಮ್ಮನ್ನು ಬೈತಾರೆ ಎಂದು ವರ್ತಕರು ಆಳಲನ್ನು ತೋಡಿಕೊಂಡರು.ಹೊರಗೆ ಇಷ್ಟು ಮಳೆಯಾಗುತ್ತಿದ್ದರೂ ಎಪಿಎಂಸಿಯ ಶೌಚಾಲಯದಲ್ಲಿ ಒಂದು ಹನಿ ನೀರಿಲ್ಲ. ಬೇಸಿಗೆಯಲ್ಲಿ ಕಷ್ಟ ಹೇಳತೀರದು, ಪ್ರತಿದಿನ ತರಕಾರಿಯ ಕಸ ವಿಲೇವಾರಿ ಮಾಡದೇ ರಾಶಿ ಬಿದ್ದು, ಕೊಳೆತು ಗಬ್ಬು ನಾರುತ್ತದೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂದು ಇನ್ನೊಬ್ಬ ವರ್ತಕ ಫಯಾಸ್ ಅಹಮ್ಮದ್ ದೂರಿದರು.ಪತ್ರಿಭಟನೆಯಲ್ಲಿ ವರ್ತಕರಾದ ಚಂದಪ್ಪ, ಲಕ್ಷ್ಮಣ್, ಓಬಳೇಶ್ ಮತ್ತಿತರರು ಭಾಗವಹಿಸಿದ್ದರು.