ರಘುಪತಿ ಭಟ್ ವಿರುದ್ಧ ಕ್ರಮಕ್ಕೆ ಉಡುಪಿ ಬಿಜೆಪಿ ಶಿಫಾರಸು

| Published : May 24 2024, 12:51 AM IST

ರಘುಪತಿ ಭಟ್ ವಿರುದ್ಧ ಕ್ರಮಕ್ಕೆ ಉಡುಪಿ ಬಿಜೆಪಿ ಶಿಫಾರಸು
Share this Article
  • FB
  • TW
  • Linkdin
  • Email

ಸಾರಾಂಶ

ರಘುಪತಿ ಭಟ್ ಜೊತೆ ಅನೇಕ ಬಿಜೆಪಿ ಕಾರ್ಯಕರ್ತರೂ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರನ್ನೆಲ್ಲ ಗಮನಿಸಲಾಗಿದೆ. ರಾಜ್ಯ ಬಿಜೆಪಿ, ಭಟ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಉಡುಪಿನೈಋತ್ಯ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಬಿಜೆಪಿ ರಾಜ್ಯ ಬಿಜೆಪಿ ವರಿಷ್ಠರಿಗೆ ಶಿಫಾರಸು ಮಾಡಿದೆ.

ರಘುಪತಿ ಭಟ್ ಜೊತೆ ಅನೇಕ ಬಿಜೆಪಿ ಕಾರ್ಯಕರ್ತರೂ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅವರನ್ನೆಲ್ಲ ಗಮನಿಸಲಾಗಿದೆ. ರಾಜ್ಯ ಬಿಜೆಪಿ, ಭಟ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದೆ. ನಂತರ ಅವರ ಬೆಂಬಲಿಗರ ಮೇಲೆ ಜಿಲ್ಲಾ ಬಿಜೆಪಿ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಭಟ್ ಅವರು ನಾಮಪತ್ರ ಸಲ್ಲಿಸುವ ಮೊದಲೇ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಪಕ್ಷಕ್ಕೆ ತೊಂದರೆ ಮಾಡಬೇಡಿ, ಇದರಿಂದ ಪಕ್ಷ ನಿಮ್ಮನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ ಎಂದು ಆರಂಭದಿಂದಲೂ ಹೇಳಿದ್ದೆವು. ಆದರೂ ಅವರು ತಮ್ಮ ನಿಲುವು ಬದಲಾಯಿಸದೆ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ನಾಮಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಅವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದ್ದೇವೆ ಎಂದವರು ಹೇಳಿದ್ದಾರೆ.

ಅವರಿಗೆ ಬಿಜೆಪಿಯಿಂದ ಅನ್ಯಾಯ ಆಗಿಲ್ಲ. ಅವರನ್ನು ಪಕ್ಷ ಯುವ ಮೋರ್ಚಾ ಅಧ್ಯಕ್ಷ, ನಗರಸಭಾ ಸದಸ್ಯ, ಜಿಲ್ಲಾಧ್ಯಕ್ಷನನ್ನಾಗಿ ಮಾಡಿದೆ. ಮೂರು ಬಾರಿ ಶಾಸಕ, ಶಿವಮೊಗ್ಗ ಚುನಾವಣಾ ಉಸ್ತುವಾರಿ ಮಾಡಿತ್ತು. ಅವರ ಬಗ್ಗೆ ಸಮಾಜದಲ್ಲಿ ತುಂಬಾ ಗೌರವ ಇದೆ, ಅದನ್ನು ಅವರು ಕಾಪಿಟ್ಟುಕೊಳ್ಳಬೇಕಾದ ಜವಾಬ್ದಾರಿ ಅವರಿಗೆ ಇದೆ ಎಂದು ಹೇಳಿದರು.

ಅವರಿಗೆ ಅಸಮಾಧಾನ ಇದ್ದರೆ ಪಕ್ಷದ ಚೌಕಟ್ಟಿನ ಒಳಗೆ ಚರ್ಚೆ ಮಾಡಬೇಕಾಗಿತ್ತು. ಅವರ ಫೋಟೋ ಕಚೇರಿಯಿಂದ ತೆಗೆದಿರುವ, ಹಾಕಿರುವ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆಲ್ಲ ಉತ್ತರ ಬಯಸುವವರು ಪಕ್ಷದ ಒಳಗೆ ಕುಳಿತು ಮಾತನಾಡಬೇಕು, ಬಂಡಾಯ ಮಾಡಬಾರದು. ಅವರು ಪ್ರಬುದ್ಧ ರಾಜಕಾರಣಿ, ಪಕ್ಷದ ಕಟ್ಟಾಳು, ಈ ರೀತಿ ಮಾಡಬಾರದಿತ್ತು ಎಂದು ಕಿಶೋರ್ ಕುಮಾರ್ ಹೇಳಿದರು.