ಸಾರಾಂಶ
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಸಾರ್ವಜನಿಕವಾಗಿ ಹಿಂಸೆಗೆ ಪ್ರಚೋದನೆ ನೀಡಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೂರು ನೀಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಸಾರ್ವಜನಿಕವಾಗಿ ಹಿಂಸೆಗೆ ಪ್ರಚೋದನೆ ನೀಡಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹಾಗೂ ಉಡುಪಿ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಪುನೀತ್ ಅವರಿಗೆ ದೂರು ನೀಡಲಾಯಿತು.ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸಂವಿಧಾನಬದ್ಧವಾಗಿ ವಿಶೇಷ ಭದ್ರತಾ ನಿಯಮಗಳ ಅಡಿಯಲ್ಲಿ ರಕ್ಷಣೆಯಿದೆ. ಶಾಸಕ ಡಾ. ಭರತ್ ಶೆಟ್ಟಿ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ರಾಹುಲ್ ಗಾಂಧಿಯವರ ಮೇಲೆ ಹಲ್ಲೆಗೆ ಪ್ರಚೋದನೆ ಮಾಡಿರುವುದು ಗಂಭೀರ ಆರೋಪವಾಗಿದೆ. ಆದ್ದರಿಂದ ಡಾ. ಭರತ್ ಶೆಟ್ಟಿ ಅವರ ಮೇಲೆ ಹಾಗೂ ಈ ಪ್ರಚೋದನೆಗೆ ಬೆಂಬಲ ನೀಡಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮೇಲೂ ಕ್ರಿಮಿನಲ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ನಾಯಕರಾದ ಮೀನಾಕ್ಷಿ ಮಾಧವ ಬನ್ನಂಜೆ, ಜ್ಯೋತಿ ಹೆಬ್ಬಾರ್, ಗಣೇಶ್ ನೆರ್ಗಿ, ಸುರೇಶ್ ಶೆಟ್ಟಿ ಬನ್ನಂಜೆ, ಸುರೇಂದ್ರ ಆಚಾರ್ಯ, ಅನಂತ್ ನಾಯ್ಕ್, ಕೃಷ್ಣ ಹೆಬ್ಬಾರ್, ಶರತ್ ಶೆಟ್ಟಿ, ಸುಕನ್ಯಾ ಪೂಜಾರಿ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಸಾಯಿರಾಜ್ ಕಿದಿಯೂರು ಹಾಗೂ ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.