ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ, ರಥೋತ್ಸವ, ವಿಟ್ಲಪಿಂಡಿ ಸಂಭ್ರಮ

| Published : Aug 28 2024, 12:47 AM IST

ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ, ರಥೋತ್ಸವ, ವಿಟ್ಲಪಿಂಡಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕಡೆಗೋಲು ಬಾಲಕೃಷ್ಣನ ನೆಲೆವೀಡು ಉಡುಪಿಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಂಡಿತು. ಸೋಮವಾರ ಮಧ್ಯರಾತ್ರಿ ಕೃಷ್ಣಮಠದೊಳಗೆ ಭಕ್ತಿ, ಶ್ರದ್ಧೆಯಿಂದ ಕೃಷ್ಣನ ಅವತಾರದ ಘಳಿಗೆ 12.07ಕ್ಕೆ ಅರ್ಘ್ಯ ಪ್ರದಾನ ಮಾಡಲಾಯಿತು. ಮಂಗಳವಾರ ಕೃಷ್ಣಮಠದ ಹೊರಗೆ ಬಾಲಕೃಷ್ಣನ ಲೀಲೆಗಳ ಪ್ರದರ್ಶನ ಮೊಸರು ಕುಡಿಕೆ ಆಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕಡೆಗೋಲು ಬಾಲಕೃಷ್ಣನ ನೆಲೆವೀಡು ಉಡುಪಿಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಂಡಿತು. ಸೋಮವಾರ ಮಧ್ಯರಾತ್ರಿ ಕೃಷ್ಣಮಠದೊಳಗೆ ಭಕ್ತಿ, ಶ್ರದ್ಧೆಯಿಂದ ಕೃಷ್ಣನ ಅವತಾರದ ಘಳಿಗೆ 12.07ಕ್ಕೆ ಅರ್ಘ್ಯ ಪ್ರದಾನ ಮಾಡಲಾಯಿತು. ಮಂಗಳವಾರ ಕೃಷ್ಣಮಠದ ಹೊರಗೆ ಬಾಲಕೃಷ್ಣನ ಲೀಲೆಗಳ ಪ್ರದರ್ಶನ ಮೊಸರು ಕುಡಿಕೆ ಆಚರಣೆ ನಡೆಯಿತು.

ಈ ಎರಡು ದಿನ ಇಡೀ ಉಡುಪಿ ಕೃಷ್ಣ ಭಕ್ತಿಯಲ್ಲಿ ಮುಳುಗಿದಂತಿತ್ತು. ಮೋಡ ಕವಿದ ವಾತಾವರಣದ ಮಧ್ಯೆಯೂ ಲಕ್ಷಾಂತರ ಮಂದಿ ಭಕ್ತರು ಲೀಲೋತ್ಸವ, ರಥೋತ್ಸವದಲ್ಲಿ ಭಾಗಿಯಾಗಿ ಪುನೀತರಾದರು.

ಮಂಗಳವಾರ ಮಧ್ಯಾಹ್ನ 3ಕ್ಕೆ ಸಂಪ್ರದಾಯದಂತೆ ರಥಬೀದಿಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯ ಚಿನ್ನದ ರಥಾರೋಹಣ ನಡೆಸಲಾಯಿತು. ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ಮಂಗಳಾರತಿ ಬೆಳಗಿದರು. ಈ ಸಂದರ್ಭ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು, ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಉಪಸ್ಥಿತರಿದ್ದರು.

ನಂತರ ಭಕ್ತರು ಗೋವಿಂದೋದ್ಗಾರದೊಂದಿಗೆ ರಥ ಎಳೆಯಲಾರಂಭಿಸಿದರು. ರಥ ಎಳೆಯುವುದಕ್ಕೂ ಭಕ್ತರ ಉತ್ಸಾಹ ಪೈಪೋಟಿ ಮೇರೆ ಮೇರಿತ್ತು. ಚೆಂಡೆ, ಕೊಂಬು, ಮಂಗಳವಾದ್ಯಗಳು ಉತ್ಸವದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದವು. ಈ ನಡುವೆ ಅಲ್ಲಲ್ಲಿ ನಿರ್ಮಿಸಲಾಗಿದ್ದ ಗುರ್ಜಿಗಳಲ್ಲಿ ಕಟ್ಟಲಾಗಿದ್ದ ಹಾಲು, ಬೆಣ್ಣೆ, ಮೊಸರು, ಕಜ್ಜಾಯದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಹಾರಿ ಕೋಲಿನಿಂದ ಒಡೆದು ಬಾಯಿ ಬಡಿದುಕೊಂಡು ಕುಣಿದಾಡುತ್ತಾ ಬೆಣ್ಣೆಕಳ್ಳ ಕೃಷ್ಣನ ಬಾಲ್ಯದ ಲೀಲೆ ನೆನಪಿಸಿದರು. ಹುಲಿವೇಷ, ಮರಕಾಲು, ರಕ್ಕಸ, ಯಕ್ಷಗಾನ ಇತ್ಯಾದಿ ವೈವಿಧ್ಯಮಯ ವೇಷಗಳು ಕೃಷ್ಣ ಹುಟ್ಟಿದ ಮಥುರೆಯನ್ನೇ ಉಡುಪಿಯಲ್ಲಿ ಸೃಷ್ಟಿಸಿದಂತಿತ್ತು.

ಪರ್ಯಾಯ ಶ್ರೀಗಳು ರಥಬೀದಿಯಲ್ಲಿ ಹಾಕಲಾಗಿದ್ದ ಎತ್ತರದ ವೇದಿಕೆಯಲ್ಲಿ ನಿಂತು ಬಾಲಕೃಷ್ಣನಿಗೆ ಸಮರ್ಪಣೆ ಮಾಡಿದ ಲಡ್ಡು, ಚಕ್ಕುಲಿ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಅದನ್ನು ಪಡೆಯಲು ಜನರ ಮೇಲಾಟವೇ ನಡೆಯಿತು.

ರಥಬೀದಿಯಲ್ಲಿ ಒಂದು ಸುತ್ತು ರಥೋತ್ಸವದ ನಂತರ, ಕೃಷ್ಣನ ಮಣ್ಣಿನ ವಿಗ್ರಹವನ್ನು ಪರ್ಯಾಯ ಶ್ರೀಗಳು ರಥಾವರೋಹಣಗೊಳಿಸಿ, ಮಠದೊಳಗೆ ಪೂಜೆ ಸಲ್ಲಿಸಿ, ನಂತರ ಮಧ್ವಸರೋವರದಲ್ಲಿ ವಿಧ್ಯುಕ್ತವಾಗಿ ವಿಸರ್ಜನೆಗೊಳಿಸಿದರು. ಅಲ್ಲೂ ನೀರೊಳಗೆ ಎಸೆದ ಕೃಷ್ಣನ ವಿಗ್ರಹವನ್ನು ಆಳದಿಂದ ಹೆಕ್ಕಿ ತರುವುದಕ್ಕೆ ಯುವಕರ ನಡುವೆ ಸ್ಪರ್ಧೆ ನಡೆಯಿತು.

-----------

-ಬಾಕ್ಸ್‌-

ಮೊಬೈಲ್, ಫೋಟೋಗ್ರಾಫರ್‌ಗಳ ಸ್ಪರ್ಧೆ

ಕೃಷ್ಣ ಲೀಲೋತ್ಸವ ಎಷ್ಟು ಜನಪ್ರಿಯವಾಗಿದೆ ಎಂದರೆ ದೇಶ-ವಿದೇಶಗಳಿಂದಲೂ ಛಾಯಾಗ್ರಾಹಕರು ಆಗಮಿಸಿದ್ದರು. ಗೊಲ್ಲರ ಮೊಸರು ಕುಡಿಕೆ ಆಟ, ಶ್ರೀಗಳಿಂದ ಪ್ರಸಾದ ವಿತರಣೆ, ಹುಲಿವೇಷ ಕುಣಿತ ಇತ್ಯಾದಿಗಳನ್ನು ಕ್ಲಿಕ್ಕಿಸಲು ಛಾಯಾಗ್ರಾಹಕರ ನಡುವೆ ಸ್ಪರ್ಧೆಯೇ ನಡೆದಿತ್ತು. ಕೃಷ್ಣಾಷ್ಟಮಿ ಫೋಟೋ ಸ್ಪರ್ಧೆಯೂ ಇದ್ದುದರಿಂದ ಛಾಯಾಗ್ರಾಹಕರ ಸಂಖ್ಯೆಯೂ ಹೆಚ್ಚಿತ್ತು. ಅವರಿಗೆ ಮೊಬೈಲ್ ಫೋಟೋಗ್ರಾಫರ್ ಗಳು ಸ್ಪರ್ಧೆ ನೀಡುತ್ತಿದ್ದರು.ಫೋಟೋ

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಕೃಷ್ಣಮಠದಲ್ಲಿ ಮಧ್ಯರಾತ್ರಿ 12.07 ಗಂಟೆಗೆ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು.