ಉಡುಪಿ ನಗರ ಕೇಂದ್ರ ಗ್ರಂಥಾಲಯ: ಗ್ರಂಥ ಪರಿಚಲನಾ, ಎರವಲು ಸೇವೆಗೆ ಚಾಲನೆ

| Published : Mar 11 2025, 12:46 AM IST

ಉಡುಪಿ ನಗರ ಕೇಂದ್ರ ಗ್ರಂಥಾಲಯ: ಗ್ರಂಥ ಪರಿಚಲನಾ, ಎರವಲು ಸೇವೆಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜರಕಾಡಿನ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪರಿಚಲನಾ (ಲೈಬ್ರೆರಿ ಅಟೋಮೇಶನ್) ಹಾಗೂ ಓದುಗರಿಗೆ ಆನ್‌ಲೈನ್ ಎರವಲು ಸೇವೆ (ಆನ್‌ಲೈನ್ ಪಬ್ಲಿಕ್ ಆ್ಯಕ್ಸೆಸ್ ಕೆಟಲಾಗ್ - ಓಪಿಎಸಿ ) ಸೌಲಭ್ಯದ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಜ್ಜರಕಾಡಿನ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪರಿಚಲನಾ (ಲೈಬ್ರೆರಿ ಅಟೋಮೇಶನ್) ಹಾಗೂ ಓದುಗರಿಗೆ ಆನ್‌ಲೈನ್ ಎರವಲು ಸೇವೆ (ಆನ್‌ಲೈನ್ ಪಬ್ಲಿಕ್ ಆ್ಯಕ್ಸೆಸ್ ಕೆಟಲಾಗ್ - ಓಪಿಎಸಿ ) ಸೌಲಭ್ಯದ ಉದ್ಘಾಟನೆ ಶುಕ್ರವಾರ ನಡೆಯಿತು.

ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಜಯವಿಭವ ಸ್ವಾಮಿ ಈ ಸೇವಾ ಸೌಲಭ್ಯಕ್ಕೆ ಚಾಲನೆ ನೀಡಿ, ಈಗಾಗಲೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹ ಹೈಟೆಕ್ ಲೈಬ್ರೆರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಫಂಡ್‌ನಲ್ಲಿ 35 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಲೈಬ್ರೆರಿ ನಿರ್ಮಾಣವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಅಧ್ಯಯನ ನಡೆಸಲು ಅಧುನಿಕ ಪುಸ್ತಕಗಳ ಜೊತೆಗೆ ಹವಾನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇದು ಒಂದು ತಿಂಗಳೊಳಗೆ ಕಾರ್ಯಗತಗೊಳ್ಳಲಿದೆ ಎಂದರು.

ಉಡುಪಿ, ಮಂಗಳೂರು, ಕರಾವಳಿ ಹಾಗೂ ಗುಲ್ಬರ್ಗ, ರಾಯಚೂರು, ಕೋಲಾರ ಮೊದಲಾದ ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಕೂತುಕೊಂಡು ಓದಬೇಕು ಎನ್ನುವ ವಾತಾವರಣ ಕಲ್ಪಿಸಲಾಗುವುದು. ಉತ್ತಮ ಖುರ್ಚಿ, ಟೇಬಲ್ ಜೊತೆಗೆ ಸಾಧ್ಯವಾದರೆ ಎಸಿ ವ್ಯವಸ್ಥೆ ಅಳವಡಿಸಲು ಸೂಚಿಸಿದ್ದೇನೆ. ಸ್ಥಳೀಯಾಡಳಿತ ನೀಡುವ ಸೆಸ್ ಸಂಗ್ರಹಣೆಯಲ್ಲಿ ಶೇ. 60ರಷ್ಟು ಪುಸ್ತಕ ಖರೀದಿ ಮಾಡಬೇಕಾಗಿದೆ. ಇದರಲ್ಲಿ ಶೇ. 20 ರಷ್ಟು ಮೊತ್ತವನ್ನು ಓದುಗರು ಇಷ್ಟಪಟ್ಟ ಪುಸ್ತಕಗಳನ್ನು ತರಿಸಿಕೊಡಲು ಅವಕಾಶವಿದೆ ಎಂದರು.

ಪ್ರಸ್ತುತ ಉಡುಪಿ ನಗರ ಕೇಂದ್ರ ಗ್ರಂಥಾಲಯ ಅತ್ಯುತ್ತಮ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ಓದುಗರಿಗೆ ತೆರೆದಿದೆ. ಉತ್ತಮ ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ಆದ್ದರಿಂದ ಉಡುಪಿಯ ಓದುಗರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ಗ್ರಂಥಾಲಯಗಳನ್ನು ತೆರೆಯಲು ಅಗತ್ಯವಾದ ಜಾಗ, ಕಟ್ಟಡ ನೀಡಿದರೆ ಜಿಲ್ಲೆಯ ಓದುಗರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಂದಿ ಕೆಎಎಸ್, ಐಎಎಸ್ ನಂತಹ ಸೇವಾಕ್ಷೇತ್ರಗಳಿಗೆ ಕಾಲಿರಿಸಬೇಕು. ಇದಕ್ಕಾಗಿ ಬೇಕಾದ ಎಲ್ಲಾ ಪುಸ್ತಕಗಳನ್ನು ಇಲಾಖೆ ಒದಗಿಸಲಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಗರ ಸಭೆ ವ್ಯಾಪ್ತಿಯಲ್ಲಿ ಇಂತಹ ಹೈಟೆಕ್ ಗ್ರಂಥಾಲಯವಿರುವುದು ಖುಷಿಯ ಸಂಗತಿ. ಆದ್ದರಿಂದ ಓದುಗರ ಹಿತಾಸಕ್ತಿಗೆ ಪೂರಕವಾಗಿ ನಗರಕೇಂದ್ರ ಗ್ರಂಥಾಲಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲಾ ಗ್ರಂಥಾಲಯದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಇದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಉಡುಪಿ ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಹಾಜರಿದ್ದರು. ಗ್ರಂಥ ಪಾಲಕಿ ರಂಜಿತಾ ಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು.