ಉಡುಪಿ: ಶಾಲೆಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಕಲರವ ಆರಂಭ

| Published : Jun 01 2024, 12:47 AM IST

ಉಡುಪಿ: ಶಾಲೆಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಕಲರವ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಶಾಲೆಯನ್ನು ಸ್ವಚ್ಛಗೊಳಿಸಿದರು, ಕೆಲವು ಶಾಲೆಗಳಲ್ಲಿ ಸ್ಥಳೀಯ ದಾನಿಗಳ ನೆರವಿನಿಂದ ಸಿಹಿತಿಂಡಿ, ಮಧ್ಯಾಹ್ನ ಪಾಯದೂಟವನ್ನೂ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾದ್ಯಂತ ಸರ್ಕಾರಿ ಶಾಲೆಗಳು ಬೇಸಿಗೆ ರಜೆ ಮುಗಿಸಿ ಗುರುವಾರ ಪುನಃ ಆರಂಭವಾಗಿವೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು, ಕೆಲವು ಶಾಲೆಗಳಲ್ಲಿ ಪೂಜೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಮೊದಲ ದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಶಾಲೆಯನ್ನು ಸ್ವಚ್ಛಗೊಳಿಸಿದರು, ಕೆಲವು ಶಾಲೆಗಳಲ್ಲಿ ಸ್ಥಳೀಯ ದಾನಿಗಳ ನೆರವಿನಿಂದ ಸಿಹಿತಿಂಡಿ, ಮಧ್ಯಾಹ್ನ ಪಾಯದೂಟವನ್ನೂ ನಡೆಸಲಾಯಿತು.

* ಶಾಸಕರಿಂದ ಸಿಹಿ ತಿಂಡಿ

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ 121 ಶಾಲೆಗಳ 20,000 ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪುಷ್ಪಾನಂದ ಫೌಂಡೇಶನ್ ಪ್ರವರ್ತಕರಾದ ಶಾಸಕ ಯಶ್ಪಾಲ್ ಸುವರ್ಣ ಸಿಹಿತಿಂಡಿ ವಿತರಿಸಿ ಬರ ಮಾಡಿಕೊಂಡಿದ್ದಾರೆ.

ಸ್ವತಃ ಶಾಸಕರೇ ಶಾಲಾ ಪುನರಾರಂಭದ ಅಂಗವಾಗಿ ಉಡುಪಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಈ ಸಿಹಿಯಂತೆ ವಿದ್ಯಾರ್ಥಿಗಳು ಶಿಕ್ಷಣ, ಫಲಿತಾಂಶ, ಭವಿಷ್ಯ ಸಿಹಿಯಾಗಲಿರಲಿ ಎಂದು ಹಾರೈಸಿದರು.

* ಮುಖ್ಯ ಶಿಕ್ಷಕರಿಗೆ ವಿದಾಯ

ಕಾಪು ತಾಲೂಕಿನ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಧ್ಯಮ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನುಕಾಪು ತಾಲೂಕು ಕ.ಸಾ.ಪ. ಅಧ್ಯಕ್ಷ ಬಿ. ಪುಂಡಲಿಕ ಮರಾಠೆ ಉದ್ಘಾಟಿಸಿದರು.

ಈ ಸಂದರ್ಭ ಶಾಲೆಯಲ್ಲಿ ೧೭ ವರ್ಷಗಳ ಕಾಲ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ಜನರಾಜ್ ಸಿ. ಸಾಲಿಯಾನ್‌ ಅವರನ್ನು ಗೌರವಿಸಲಾಯಿತು. ಪ್ರಭಾರ ಮುಖ್ಯಶಿಕ್ಷಕಿ ರಿನುಷಾ ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.