ಶೈಕ್ಷಣಿಕ ಜ್ವಲಂತ ಸವಾಲುಗಳ ನಡುವೆ ಶಾಲೆ ಆರಂಭ

| Published : Jun 01 2024, 12:47 AM IST

ಶೈಕ್ಷಣಿಕ ಜ್ವಲಂತ ಸವಾಲುಗಳ ನಡುವೆ ಶಾಲೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ದಿನ ಶಾಲೆಗೆ ಬಂದ ಮಕ್ಕಳನ್ನು ಮೇಳ-ತಾಳ ವಾದ್ಯಗಳೊಂದಿಗೆ, ಹೂಗುಚ್ಛ-ಸಿಹಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿ, ಶಿಕ್ಷಕರು, ಎಸ್‌ಡಿಎಂಸಿ, ಮುಖಂಡರು ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಹಲವಾರು ವರ್ಷಗಳಿಂದ ಜಿಲ್ಲೆ ಎದುರಿಸುತ್ತಿರುವ ಶೈಕ್ಷಣಿಕ ಜ್ವಲಂತ ಸವಾಲುಗಳ ನಡುವೆ ಪ್ರತಿವರ್ಷದಿಂದ ಈ ಬಾರಿಯೂ ಶಾಲೆಗಳನ್ನು ಶುಕ್ರವಾರ ಆರಂಭಿಸಲಾಯಿತು.

ಕಾಯಂ ಹಾಗೂ ಅತಿಥಿ ಶಿಕ್ಷಕರ ಕೊರತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಸೇರಿ ಅಗತ್ಯ ಸವಲತ್ತುಗಳ ಮರೀಚಿಕೆ, ಪ್ರಸಕ್ತ ಸಾಲಿನ ಪಠ್ಯ-ಪುಸ್ತಕ, ಸಮವಸ್ತ್ರ ಅಸಮರ್ಪಕ ವಿತರಣೆ ಆರೋಪ, ಗುಣಮಟ್ಟದ ಶಿಕ್ಷಣದ ಕೊರತೆಯಡಿಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ನಗರ ಸೇರಿ ಜಿಲ್ಲೆ ವಿವಿಧ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಪುನರಾರಂಭಗೊಂಡವು.

ಶಿಕ್ಷಣ ವ್ಯವಸ್ಥೆ ಒಳಗಡೆ ಎಷ್ಟೇ ಸಮಸ್ಯೆಗಳು ತಾಂಡವಾಡುತ್ತಿದ್ದರು ಹೊರಗಡೆ ಮಿಂಚುವ ಮಾದರಿಯಲ್ಲಿ ಶಾಲೆ ಸಿಂಗರಿಸಿ, ಮೊದಲ ದಿನ ಶಾಲೆಗೆ ಬಂದ ಮಕ್ಕಳನ್ನು ಮೇಳ-ತಾಳ ವಾದ್ಯಗಳೊಂದಿಗೆ, ಹೂಗುಚ್ಛ-ಸಿಹಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿ, ಶಿಕ್ಷಕರು, ಎಸ್‌ಡಿಎಂಸಿ, ಮುಖಂಡರು ಸ್ವಾಗತಿಸಿದರು.

ದುಗನೂರು ಶಾಲಾ ಪ್ರಾರಂಭೋತ್ಸವ:ಜಿಲ್ಲೆಯ ರಾಯಚೂರು ತಾಲೂಕಿನ ಗಿಲ್ಲೇಸೂಗುರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ದುಗುನೂರು ಗ್ರಾಮದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

2024-25ನೇ ಸಾಲಿನ ಶೈಕ್ಷಣಿಕ ಬಲವರ್ಧನೆ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ಉದ್ಘಾಟಿಸಿ, ಮಾತಾನಾಡಿ, ಮಕ್ಕಳು ಪ್ರತಿ ನಿತ್ಯ ಶಾಲೆಗೆ ಬರುವ ಮೂಲಕ ಶಿಕ್ಷಕರು ಹೇಳಿ ಕೊಡುವ ಪಾಠ ಶ್ರದ್ಧೆಯಿಂದ ಆಲಿಸಿ, ಮುಂದಿನ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಶೈಕ್ಷಣಿಕ ಸ್ಥಿತಿ ಉತ್ತಮ ಮಾಡಿಕೊಳ್ಳಲು ಸಲಹೆ ನೀಡಿ, ಮಕ್ಕಳು ಸರಕಾರಿ ಸೌಲಭ್ಯ ಪಡೆದು ಗುಣಮಟ್ಟದ ಶಿಕ್ಷಣ ಪಡೆಯಲು ತಿಳಿಸಿದರು.

ಈ ವೇಳೆ ಕ್ಷೇತ್ರ ಶಿಕ್ಣಣಾಧಿಕಾರಿ ಚಂದ್ರಶೇಖರ ಭಂಡಾರಿ, ಉಪನಿರ್ದೇಶಕರಾದ ಕೆ.ಡಿ ಬಡಿಗೇರ್, ಕ್ಷೇತ್ರ ಸಮನ್ವಯಾಧಿಕಾರಿ ವೆಂಕೋಬ, ಶಿಕ್ಷಣ ಸಂಯೋಜಕ ರಾಘವೇಂದ್ರ, ಸಂಪನ್ಮೂಲ ವ್ಯಕ್ತಿ ಸಂತೋಷ ಶಾಲಾ ಮಕ್ಕಳ ಪಾಲಕರಾದ ನರಸಪ್ಪ, ಶಿವರಾಮ, ಬನ್ನೆಪ್ಪ, ಸೂರಪ್ಪಗೌಡ, ಗ್ರಾಮ ಪಂಚಾಯತ್ ಅಧಿಕಾರಿಗಳು, ಶಾಲಾ ಮುಖ್ಯಗುರುಗಳು ಗಫೂರ್, ಸಹ ಶಿಕ್ಷಕರು ಚಂದ್ರಶೇಖರ ನಾಯಕ್, ಸಂಪತರಾಜ್, ನರಸಮ್ಮ, ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.