ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ

| Published : Jun 01 2024, 12:47 AM IST

ಸಾರಾಂಶ

ಶಿಸ್ತು ಹಾಗೂ ಸಂಯಮ ಕಲಿಸುವುದರ ಜೊತೆಗೆ ಅಕ್ಷರದ ಮೂಲಕ ಅರಿವು ಮೂಡಿಸಿ ಭವ್ಯ ಭಾರತದ ಉತ್ತಮ ನಾಗರಿಕರಾಗುವಂತೆ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ

ಗದಗ: ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಇಲ್ಲಿಯ ಎಸ್.ಎಂ. ಕೃಷ್ಣ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 12ರಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ, ಡಯಟ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಅಕ್ಷರ ದಾಸೋಹ ಬಿಸಿಯೂಟ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ ಎಸ್. ಮಾತನಾಡಿ, ಶಿಸ್ತು ಹಾಗೂ ಸಂಯಮ ಕಲಿಸುವುದರ ಜೊತೆಗೆ ಅಕ್ಷರದ ಮೂಲಕ ಅರಿವು ಮೂಡಿಸಿ ಭವ್ಯ ಭಾರತದ ಉತ್ತಮ ನಾಗರಿಕರಾಗುವಂತೆ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಕಾಯಾ-ವಾಚಾ-ಮನಸಾ ಕಾರ್ಯನಿರ್ವಹಿಸಬೇಕು ಎಂದರು.

ಉಪನಿರ್ದೇಶಕ ಎಂ.ಎ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿದೆ. ಇಂದಿನ ದಿನವೇ ಪ್ರಾರಂಭೋತ್ಸವ ಮಾಡಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಎಲ್ಲ ಪ್ರಧಾನ ಗುರುಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಹಾಜರಾಗುವಂತೆ ನೋಡಿಕೊಂಡು ಸರಕಾರದ ಹಾಗೂ ಇಲಾಖೆಯ ಉತ್ತೇಜಕಗಳನ್ನು ಮಕ್ಕಳಿಗೆ ತಲುಪಿಸುವಂತೆ ಮಾಡಿ ಹಾಜರಾತಿ ಹೆಚ್ಚಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ವೇಳೆ ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ, ಡಿವೈಪಿಸಿ ಎಂ.ಎಚ್. ಕಂಬಳಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಸ್.ಡಿ. ಕನವಳ್ಳಿ, ರಾ.ಸ.ನೌ. ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜಿಕರ, ತಾಪಂ ಕಾ.ನಿ. ಅಧಿಕಾರಿ ಮಾಣಿಕರಾವ್, ಪ್ರೌ.ಶಾ.ಶಿ. ಸಂಘದ ಅಧ್ಯಕ್ಷ ಪಿ.ಎಚ್. ಕಡಿವಾಲ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ವಿ.ಎಂ. ಹಿರೇಮಠ, ಸ.ನಿ. ಅಕ್ಷರ ದಾಸೋಹ ಕೊಟ್ರೇಶ ವಿಭೂತಿ, ವಿವೇಕಾನಂದಗೌಡ ಪಾಟೀಲ, ಎಚ್.ಆರ್. ಕೋಣಿಮನಿ, ನಾಗರಳ್ಳಿ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿ.ಜಿ. ಪಾಟೀಲ ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಸ್ವಾಗತಿಸಿದರು. ಸುಲ್ತಾನಪುರ ಶಿವಾನಿ ಸಂಗಮದ ವಿದ್ಯಾರ್ಥಿನಿಯರು ಸಂವಿಧಾನ ಪೀಠಿಕೆ ಓದಿದರು. ಶಿಕ್ಷಕ ಹೂಯಿಲಗೋಳ ನಿರೂಪಿಸಿದರು.