ಜ್ಞಾನದ ಉಗಮ ಸ್ಥಾನ ಉಡುಪಿ ಕ್ಷೇತ್ರ: ಪುತ್ತಿಗೆ ಸ್ವಾಮೀಜಿ

| Published : Apr 01 2024, 12:49 AM IST

ಜ್ಞಾನದ ಉಗಮ ಸ್ಥಾನ ಉಡುಪಿ ಕ್ಷೇತ್ರ: ಪುತ್ತಿಗೆ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣ ಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಆನ್ ಲೈನ್ ವಿಶ್ವ ಗೀತಾ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು. ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂದೇಶ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಧ್ವವಿಜಯ ಗ್ರಂಥವು ದಾಖಲಿಸಿರುವಂತೆ ಉಡುಪಿ ಕ್ಷೇತ್ರವು ಜ್ಞಾನದ ಉಗಮ ಸ್ಥಾನವಾಗಿದೆ. 8 ಶತಮಾನಗಳ ಹಿಂದೆ ಇದೇ ಪ್ರದೇಶದಲ್ಲಿ ಅವತರಿಸಿದ ಜಗದ್ಗುರು ಶ್ರೀ ಮಧ್ವಾಚಾರ್ಯರು ವಿಶ್ವಕ್ಕೆ ಹೊಸ ಜ್ಞಾನ ಭಂಡಾರ ಕರುಣಿಸಿದ್ದಾರೆ ಎಂದು ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಶ್ರೀಗಳು ಭಾನುವಾರ ಶ್ರೀಕೃಷ್ಣ ಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಆನ್ ಲೈನ್ ವಿಶ್ವ ಗೀತಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಂದೇಶ ನೀಡಿದರು.

ತತ್ವವಾದದ ಉಗಮ ಕ್ಷೇತ್ರವಾದ ಉಡುಪಿ ಇಂದಿಗೂ ಜ್ಞಾನದ ಕ್ಷೇತ್ರವಾಗಿದೆ. ಇಂಥಹ ಶ್ರೇಷ್ಠ ಕ್ಷೇತ್ರವು ಇಂದು ವಿಶ್ವದ ಭೂಪಟದಲ್ಲಿ ಶಿಕ್ಷಣ - ಆರ್ಥಿಕ -ಆರೋಗ್ಯದ ಪ್ರಮುಖ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಇಂಥಹ ಕ್ಷೇತ್ರದಲ್ಲಿ ವಿಶ್ವ ಗೀತಾ ಸಮ್ಮೇಳನವನ್ನು ನಿಮಿತ್ತವಾಗಿಸಿಕೊಂಡು ಭಾಗವಹಿಸಿದ ನೀವೆಲ್ಲರೂ ಧನ್ಯರು ಎಂದು ಶ್ರೀಗಳು ಅನುಗ್ರಹಿಸಿದರು

ಸಾನ್ನಿಧ್ಯ ವಹಿಸಿದ್ದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ, ಭಾರತೀಯರ ಅಭಿಮಾನದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಅರ್ಥಾನುಸಂಧಾನದೊಂದಿಗೆ ಅಭ್ಯಾಸ ಮಾಡಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪಾರಾಯಣದ ಯಜ್ಞದಲ್ಲಿ ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭ ರಶ್ಯಾ ದೇಶದಲ್ಲಿ ವಾಸವಾಗಿರುವ ಸುಹಾಸ್ ಹೋತಾ ಅವರು ರಶ್ಯಾ ದೇಶದಲ್ಲಿ ಭಗವದ್ಗೀತೆಗಿರುವ ಗೌರವಾದರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನಕ್ಕೆ ಆಗಮಿಸಿದ್ದ ಒಡಿಶಾ, ಅಸ್ಸಾಂ, ಆಂಧ್ರ, ಕರ್ನಾಟಕ ಮತ್ತಿತರ ರಾಜ್ಯಗಳ ವಿದ್ವಾಂಸರಿಗೆ ಶ್ರೀಗಳು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿ ಶ್ರೀಕೃಷ್ಣ ಪ್ರಸಾದದೊಂದಿಗೆ ಸನ್ಮಾನಿಸಿದರು.

ಡಾ.ಬಿ.ಗೋಪಾಲಾಚಾರ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.