ಸಾರಾಂಶ
ಹೆಬ್ರಿಯ ಪೀತಬೈಲು ಎಂಬಲ್ಲಿ ನಡೆದ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ- ಅಂಬೇಡ್ಕರ್ ವಾದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಹೆಬ್ರಿಯ ಪೀತಬೈಲು ಎಂಬಲ್ಲಿ ನಡೆದ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ- ಅಂಬೇಡ್ಕರ್ ವಾದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.ವಿಕ್ರಂ ಗೌಡ ಅಲಿಯಾಸ್ ವಿಕ್ರಂ ಗೌಡ್ಲು ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದವನಾಗಿರುತ್ತಾನೆ. ಕಳೆದ 20 ವರ್ಷಗಳಿಂದ ಈತನು ನಕ್ಸಲ್ ಚಳುವಳಿಯಲ್ಲಿ ಗುರುತಿಸಿಕೊಂಡು ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾನೆ ಎಂದು ನಾವು ಮಾಧ್ಯಮಗಳ ಮೂಲಕ ತಿಳಿದುಕೊಂಡಿರುತ್ತೇವೆ.ಆದರೆ ಈ ಮೇಲೆ ಹೇಳಿದ ವಿಕ್ರಂ ಗೌಡ ಅಲಿಯಾಸ್ ವಿಕ್ರಂ ಗೌಡ್ಲು ಮೊನ್ನೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿ, ಪೊಲೀಸರು ತಮ್ಮ ರಕ್ಷಣೆಗೋಸ್ಕರ ಆತನ ಮೇಲೆ ಗುಂಡು ಹಾರಿಸಿದ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವುದು ನಮಗೆ ತಿಳಿದು ಬಂದಿದೆ. ಅನೇಕರು ಈ ಕಾರ್ಯಾಚರಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.ಆದ್ದರಿಂದ ವಿಕ್ರಂ ಗೌಡ ಅಲಿಯಾಸ್ ವಿಕ್ರಂ ಗೌಡ್ಲು ಇವನ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಕಂಡುಕೊಂಡು ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭ ದಸಂಸ ರಾಜ್ಯ ಸಂ. ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಪ್ರ. ಸಂಚಾಲರಾದ ಮಂಜುನಾಥ್ ಗಿಳಿಯಾರು, ಜಿಲ್ಲಾ ಸಂ. ಸಂಚಾಲಕ ಶ್ಯಾಮರಾಜ್ ಬಿರ್ತಿ, ಶ್ಯಾಮ್ ಸುಂದರ್ ತೆಕ್ಕಟ್ಟೆ, ಮಂಜುನಾಥ್ ನಾಗೂರು, ಸುರೇಶ್ ಹಕ್ಲಾಡಿ, ಸಲಾಹುದ್ದೀನ್ ಶೇಖ್, ಅಝೀಝ್ ಉದ್ಯಾವರ,ಇದ್ರೀಸ್ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.