‘ಜ್ಞಾನ ಭಾರತಂ ಮಿಷನ್’ ಯೋಜನೆಯಡಿ ದೇಶದಲ್ಲಿ ಶತಮಾನಗಳಷ್ಟು ಹಳೆಯ ಕೈ ಬರಹಗಳು, ಹಸ್ತ ಪ್ರತಿಗಳು ಹಾಗೂ ಮತ್ತಿತರ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸುವ ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.

ಉಡುಪಿ: ‘ಜ್ಞಾನ ಭಾರತಂ ಮಿಷನ್’ ಯೋಜನೆಯಡಿ ದೇಶದಲ್ಲಿ ಶತಮಾನಗಳಷ್ಟು ಹಳೆಯ ಕೈ ಬರಹಗಳು, ಹಸ್ತ ಪ್ರತಿಗಳು ಹಾಗೂ ಮತ್ತಿತರ ದಾಖಲೆಗಳನ್ನು ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸುವ ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ. ಸೋಮವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ರಾಷ್ಟ್ರದಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮಲ್ಲಿ ಲಭ್ಯವಿರುವ ಹಳೆಯ ಕೈಬರಹ, ಹಸ್ತಪ್ರತಿ, ದಾಖಲೆಗಳ ಮಾಹಿತಿ ನೀಡಿದರೆ ಸಮೀಕ್ಷೆದಾರರು ತಮ್ಮಲ್ಲಿಗೆ ಬಂದು ದಾಖಲಿಸಿಕೊಳ್ಳಲಿದ್ದಾರೆ ಎಂದರು. ಐತಿಹಾಸಿಕ ದಾಖಲೆಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. ಜಿಲ್ಲೆಯ ಎಲ್ಲ ವಿವಿಗಳು, ವಸ್ತುಸಂಗ್ರಹಾಲಯಗಳು, ಸಂಘ-ಸಂಸ್ಥೆಗಳು, ಮಠಗಳು ಮತ್ತು ವ್ಯಕ್ತಿಗಳ ಬಳಿ ಇರುವಂತಹ ಹಸ್ತಪ್ರತಿಗಳನ್ನು ದಾಖಲೀಕರಣಗೊಳಿಸಬೇಕಾಗಿದ್ದು, ಈ ಮಹತ್ವದ ಕಾರ್ಯಕ್ಕೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಶೋಧನಾ ಕೇಂದ್ರಗಳು, ಸಂಘ, ಸಂಸ್ಥೆಗಳು, ಮಠಗಳು ಮತ್ತು ದಾಖಲೆ ಹೊಂದಿರುವ ವ್ಯಕ್ತಿ, ಕುಟುಂಬಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವ ಅಗತ್ಯವಿದ್ದು, ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯ ಪ್ರಚಾರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾಧಿಕಾರಿ ಮಂಜುನಾಥ್ ಬಿ., ಜ್ಞಾನ ಭಾರತಂ ಉಡುಪಿಯ ಜಿಲ್ಲಾ ಮಟ್ಟದ ಸಂಯೋಜಕ ಡಾ. ಗೋಪಾಲಚಾರ್, ಪುರಾತತ್ವ ಸಂಗ್ರಹಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಡಾ. ಬಿ. ಜಗದೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.