ಸಾರಾಂಶ
ಬುಧವಾರ ರಾಷ್ರ್ರೀಯ ಹೆದ್ದಾರಿ 169 ಎ ಇದರ ಉಡುಪಿ ನಗರ ಹಾಗೂ ಮಣಿಪಾಲ ರಸ್ತೆಯ ಇಂದ್ರಾಳಿ ಸಮೀಪದ ರೈಲ್ವೇ ಮೇಲ್ಸೇತುವೆ ಅಭಿವೃದ್ಧಿ ಕಾಮಗಾರಿ ಪ್ರಗತಿ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣದ ಅಂತಿಮ ಘಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು ಎಲ್ಲಾ ರೀತಿಯ ಅಗತ್ಯ ಸಿದ್ಥತೆ ಮಾಡಿಕೊಳ್ಳುವುದರೊಂದಿಗೆ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.ಅವರು ಬುಧವಾರ ರಾಷ್ರ್ರೀಯ ಹೆದ್ದಾರಿ 169 ಎ ಇದರ ಉಡುಪಿ ನಗರ ಹಾಗೂ ಮಣಿಪಾಲ ರಸ್ತೆಯ ಇಂದ್ರಾಳಿ ಸಮೀಪದ ರೈಲ್ವೇ ಮೇಲ್ಸೇತುವೆ ಅಭಿವೃದ್ಧಿ ಕಾಮಗಾರಿ ಪ್ರಗತಿ ವೀಕ್ಷಿಸಿ ಮಾತನಾಡಿದರು.
ರೈಲ್ವೇ ಮೇಲ್ಸೇತುವೆಯಾಗಿ ಕಬ್ಬಿಣದ ಗರ್ಡರ್ ನಿರ್ಮಾಣದ ವೆಲ್ಡಿಂಗ್ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆಯ ವತಿಯಿಂದ ವೆಲ್ಡಿಂಗ್ ಕಾರ್ಯದ ಗುಣಮಟ್ಟವನ್ನು ಸ್ಥಳೀಯವಾಗಿ ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ ರೈಲ್ವೇ ಡಿಸೈನ್ ಮತ್ತು ಸೇಫ್ಟಿ ಆರ್ಗನೈಸೇಷನ್ ಲಕ್ನೋ ಅವರಿಂದ ತ್ವರಿತವಾಗಿ ಪರಿಶೀಲನೆ ಕೈಗೊಳ್ಳಬೇಕಾಗಿದೆ ಎಂದರು.ರೈಲ್ವೇ ಮೇಲ್ಸೇತುವೆಯಾಗಿ ಕಬ್ಬಿಣದ ಗರ್ಡರ್ ಅಳವಡಿಸಲು ಅಗತ್ಯವಿರುವ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳುವುದರೊಂದಿಗೆ ರೈಲ್ವೇ ಇಲಾಖೆಯ ವತಿಯಿಂದ ನಿಗದಿಪಡಿಸುವ ದಿನಾಂಕದಂದು ರೈಲ್ವೇ ಸಂಚಾರ ಸ್ಥಗಿತಗೊಳಿಸಿ, ಅಳವಡಿಸುವ ಕಾರ್ಯ ಕೈಗೊಳ್ಳಬೇಕು ಎಂದರು.
ಗರ್ಡರ್ಸ್ ಅನ್ನು ರೈಲ್ವೇ ಮೇಲ್ಸೇತುವೆಯಾಗಿ ಅಳವಡಿಸಲು ಅಗತ್ಯವಿರುವ ಬೃಹತ್ ಕ್ರೇನ್‌ಗಳು, ಜಾಕ್‌ಗಳು, ರೋಲರ್‌ಗಳು, ರೇಲ್ಸ್‌ಗಳು ಸೇರಿದಂತೆ ಮತ್ತಿತರ ಅವಶ್ಯವಿರುವ ಸಾಧನಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದ ಅವರು, ಈ ಕಾಮಗಾರಿ ಸಂದರ್ಭದಲ್ಲಿ ಸುರಕ್ಷಿತವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಕೊಂಕಣ ರೈಲ್ವೆಯ ಸೀನೀಯರ್ ಎಂಜಿನಿಯರ್ ಗೋಪಾಲ ಕೃಷ್ಣ, ಲೋಕೋಪಯೋಗಿ ಇಲಾಖೆಯ ಎಇ ಮಂಜುನಾಥ್, ಗುತ್ತಿಗೆದಾರರು ಮತ್ತಿತರರಿದ್ದರು.